
ಮಾಲ್ಡಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಟಿಎಂಸಿ ಹಿರಿಯ ಕೌನ್ಸಿಲರ್ ಒಬ್ಬರು ಹತ್ಯೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹೀಗಿರುವಾಗಲೇ ಮತ್ತೋರ್ವ ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅದೇ ವಲಯದಲ್ಲಿ ಮಂಗಳವಾರ ಹಾಡಹಗಲೇ ನಡೆದ ಶೂಟೌಟ್ ಘಟನೆಯಲ್ಲಿ ಟಿಎಂಸಿಯ ಇತರ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದಿನ ಘಟನೆಯಂತೆಯೇ ಪಕ್ಷದೊಳಗೆ ಆಂತರಿಕ ಪೈಪೋಟಿಯಿಂದ ಇಂದು ಶೂಟೌಟ್ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತನನ್ನು ಹಸನ್ ಶೇಕ್ ಎಂದು ಗುರುತಿಸಲಾಗಿದೆ. ಟಿಎಂಸಿ ಸ್ಥಳೀಯ ಸಮಿತಿ ಅಧ್ಯಕ್ಷ ಬಕುಲ್ ಶೇಕ್ ಮತ್ತು ಎಸರುದ್ದೀನ್ ಶೇಖ್ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಎಂಸಿ ಸ್ಥಳೀಯ ಸಮಿತಿ ಅಧ್ಯಕ್ಷರು ಪಕ್ಷದ ಕಾರ್ಯಕರ್ತರೊಂದಿಗೆ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಕಾಲಿಯಾಗಂಜ್ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ. ಗುಂಡೇಟಿನಿಂದ ಪಕ್ಷದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ ಎಂದು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಘೋಷಿಸಿದರು. ಇನ್ನಿಬ್ಬರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಜನವರಿ 2 ರಂದು ಮಾಲ್ಡಾದಲ್ಲಿ ಟಿಎಂಸಿ ಕೌನ್ಸಿಲರ್ ದುಲಾಲ್ ಸರ್ಕಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
Advertisement