
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ತೃಣಮೂಲ ಕಾಂಗ್ರೆಸ್ (TMC) ಕೌನ್ಸಿಲರ್ ದುಲಾಲ್ ಸರ್ಕಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜಲ್ಜಾಲಿಯಾ ಮೋರ್ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದುಲಾಲ್ ಸರ್ಕಾರ್ ಮೇಲೆ ಸಮೀಪದಿಂದ ಹಲವಾರು ಬಾರಿ ತಲೆಗೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದುಲಾಲ್ ರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಆಘಾತಕಾರಿ ದೃಶ್ಯವೊಂದು ಸೆರೆಯಾಗಿದೆ. ಇಬ್ಬರು ಯುವಕರು ಮುಖಕ್ಕೆ ಮಫ್ಲರ್ ಹಾಕಿಕೊಂಡು ಬಂದಿದ್ದಾರೆ. ದುಲಾಲ್ ಸರ್ಕಾರ್ ಅಂಗಡಿಯ ಹೊರಗೆ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಯುವಕರ ಕೈಯಲ್ಲಿ ಬಂದೂಕು ಕಂಡು ದುಲಾಲ್ ಅಂಗಡಿಯೊಳಗೆ ಓಡಲು ಯತ್ನಿಸಿದ್ದಾರೆ. ಇಬ್ಬರೂ ಯುವಕರು ಕೂಡ ಅಂಗಡಿಗೆ ನುಗ್ಗಿ ದುಲಾಲ್ ಸರ್ಕಾರ್ ಮೇಲೆ ಗುಂಡು ಹಾರಿಸಿದ್ದಾರೆ. ದುಲಾಲ್ ತಲೆಗೆ ಗುಂಡು ತಗುಲಿದೆ. ಆ ಸಮಯದಲ್ಲಿ ಅಂಗಡಿಯಲ್ಲಿ ಇತರ ಉದ್ಯೋಗಿಗಳು ಇದ್ದರು. ಈ ಹಠಾತ್ ಘಟನೆಯಿಂದ ಅವರು ದಿಗ್ಭ್ರಮೆಗೊಂಡಿದ್ದಾರೆ.
ಮಾಲ್ಡಾದಲ್ಲಿ ಹಗಲು ಹೊತ್ತಿನಲ್ಲಿ ಗುಂಡಿನ ದಾಳಿ ನಡೆದಿರುವುದರಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೂವರು ದಾಳಿಕೋರರು ಯಾರು ಮತ್ತು ಅವರು ಏಕೆ ಗುಂಡು ಹಾರಿಸಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಉದ್ವಿಗ್ನತೆ ಉಂಟಾಗಿದೆ.
ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸರ್ಕಾರ್ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸರ್ಕಾರ್ ಅವರು ಬಾಬ್ಲಾ ಎಂದು ಪ್ರಸಿದ್ಧರಾಗಿದ್ದರು. "ನನ್ನ ನಿಕಟ ಸಹವರ್ತಿ ಮತ್ತು ಅತ್ಯಂತ ಜನಪ್ರಿಯ ನಾಯಕ ಬಾಬ್ಲಾ ಸರ್ಕಾರ್ ಅವರನ್ನು ಇಂದು ಕೊಲೆ ಮಾಡಲಾಗಿದೆ" ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಆರಂಭದಿಂದಲೂ ದುಲಾಲ್ ಹಾಗೂ ಅವರ ಪತ್ನಿ ಚೈತಾಲಿ ಸರ್ಕಾರ್ ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಬಾಬ್ಲಾ ಕೌನ್ಸಿಲರ್ ಆಗಿ ಆಯ್ಕೆಯಾದರು. ಈ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ದುಃಖಿತ ಕುಟುಂಬಕ್ಕೆ ನನ್ನ ಸಂತಾಪವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ದೇವರು ಚೈತಾಳಿಗೆ ಬದುಕಲು ಮತ್ತು ಹೋರಾಡಲು ಶಕ್ತಿಯನ್ನು ನೀಡಲಿ ಎಂದು ಬರೆದುಕೊಂಡಿದ್ದಾರೆ.
Advertisement