
ಮಣಿಪುರದಲ್ಲಿ ಹಿಂಸಾಚಾರ ಇನ್ನೂ ಮುಂದುವರಿದಿದೆ. ಜಾತಿ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಬಿಹಾರದ ಇಬ್ಬರು ಯುವಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಕ್ಚಿಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ವಲಸೆ ಕಾರ್ಮಿಕರಿಬ್ಬರನ್ನು ಹತ್ಯೆ ಮಾಡಿದ್ದ 18 ವರ್ಷದ ಉಗ್ರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಕಾರ್ಮಿಕರು ಕಕ್ಚಿಂಗ್ ಜಿಲ್ಲೆಯ ಕೈರಾಕ್‌ನಲ್ಲಿ ನಿರ್ಮಾಣ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಪಂಚಾಯತ್ ಕಚೇರಿ ಬಳಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು 18 ವರ್ಷದ ಸುನಾಲಾಲ್ ಕುಮಾರ್ ಮತ್ತು 17 ವರ್ಷದ ದಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಗೋಪಾಲಗಂಜ್ ಜಿಲ್ಲೆಯ ರಾಜವಾಹಿ ಗ್ರಾಮದ ನಿವಾಸಿಗಳಾಗಿದ್ದರು.
ಕಕ್ಚಿಂಗ್-ವಾಬಗೈ ರಸ್ತೆಯಲ್ಲಿ ಸಂತ್ರಸ್ತರು ಕಾಕ್ಚಿಂಗ್ ಮಾರ್ಕೆಟ್‌ನಲ್ಲಿರುವ ತಮ್ಮ ಬಾಡಿಗೆ ಮನೆಗೆ ಸೈಕಲ್‌ನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು, ಆದರೆ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಮಣಿಪುರದ ರಾಜಧಾನಿ ಇಂಫಾಲ್ ಕಣಿವೆಯ ತೌಬಲ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಪೊಲೀಸ್ ಕಮಾಂಡೋಗಳ ಎನ್ಕೌಂಟರ್ ನಂತರ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಕೊಲ್ಲಲಾಯಿತು. ಇತರ ಆರು ಮಂದಿಯನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಒಬ್ಬರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement