
ನವದೆಹಲಿ: ದೆಹಲಿಯ ಕೋಟ್ಲಾ ರಸ್ತೆಯ 9ಎ ನಲ್ಲಿ ನಿರ್ಮಿಸಲಾದ ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಉದ್ಘಾಟಿಸಿದರು. ಇದರೊಂದಿಗೆ ಕಳೆದ 47 ವರ್ಷಗಳಿಂದ 24, ಅಕ್ಬರ್ ರಸ್ತೆ ಆವರಣದಿಂದ ಕಾರ್ಯನಿರ್ವಹಿಸುತ್ತಿರುವ ದೇಶದ ಅತ್ಯಂತ ಹಳೆಯ ಪಕ್ಷದ ಕಚೇರಿ ಇನ್ನು ಇತಿಹಾಸ ಮಾತ್ರ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರ ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಹೊಸ ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಹಾರಿಸಿದರು ಮತ್ತು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು.
ನಂತರ ಸೋನಿಯಾ ಗಾಂಧಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಖರ್ಗೆ ಅವರಿಗೆ ಕಟ್ಟಡದ ಪ್ರವೇಶದ್ವಾರದಲ್ಲಿ ರಿಬ್ಬನ್ ಕತ್ತರಿಸಲು ತಮ್ಮೊಂದಿಗೆ ಸೇರಿಕೊಳ್ಳಲು ಕೇಳಿಕೊಂಡರು.
ಹೊಸ ಅತ್ಯಾಧುನಿಕ ಎಐಸಿಸಿ ಪ್ರಧಾನ ಕಚೇರಿ - ಇಂದಿರಾ ಗಾಂಧಿ ಭವನ, ತನ್ನ ಧೀಮಂತ ನಾಯಕರ ದೃಷ್ಟಿಕೋನವನ್ನು ಎತ್ತಿಹಿಡಿಯುವ ಕಾಂಗ್ರೆಸ್ ಪಕ್ಷದ ನಿರಂತರ ಧ್ಯೇಯವನ್ನು ಸಂಕೇತಿಸುತ್ತದೆ ಎಂದು ಈ ಹಿಂದೆ ಪಕ್ಷ ಹೇಳಿತ್ತು.
"ಇಂದಿರಾ ಗಾಂಧಿ ಭವನದ ನಿರ್ಮಾಣವನ್ನು ಸೋನಿಯಾ ಗಾಂಧಿ ಕಾಂಗ್ರೆಸ್ ಮುಖ್ಯಸ್ಥೆಯಾಗಿದ್ದಾಗ ಪ್ರಾರಂಭಿಸಲಾಗಿತ್ತು.
Advertisement