ದೆಹಲಿ ಚುನಾವಣೆ: ₹ 500ಕ್ಕೆ ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ, ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಭರವಸೆ
ನವದೆಹಲಿ: ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ನಗರದ ನಿವಾಸಿಗಳಿಗೆ 500 ರೂ. ದರದಲ್ಲಿ ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್ ಮತ್ತು 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಗುರುವಾರ ಭರವಸೆ ನೀಡಿದೆ.
ಎಐಸಿಸಿ ದೆಹಲಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಈ ಘೋಷಣೆ ಮಾಡಿದರು.
ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ತಾನು ನೀಡಿರುವ ಐದು ಭರವಸೆಗಳನ್ನು ಪೂರೈಸುತ್ತದೆ ಎಂದು ರೆಡ್ಡಿ ಹೇಳಿದರು.
ಜನವರಿ 6 ರಂದು ಕಾಂಗ್ರೆಸ್ ತನ್ನ 'ಪ್ಯಾರಿ ದೀದಿ ಯೋಜನೆ'ಯನ್ನು ಘೋಷಿಸಿತು. ದೆಹಲಿಯಲ್ಲಿ ಗದ್ದುಗೆ ಏರಿದರೆ ಮಹಿಳೆಯರಿಗೆ ಮಾಸಿಕ 2,500 ರೂ. ನೀಡುವುದಾಗಿ ಹೇಳಿತ್ತು.
ಜನವರಿ 8 ರಂದು, ಪಕ್ಷವು 'ಜೀವನ ರಕ್ಷಾ ಯೋಜನೆ'ಯನ್ನು ಘೋಷಿಸಿತು. ಅದರ ಅಡಿಯಲ್ಲಿ 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸುವುದಾಗಿ ಭರವಸೆ ನೀಡಿತು. ದೆಹಲಿಯಲ್ಲಿರುವ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 8,500 ರೂಪಾಯಿಗಳನ್ನು ಒಂದು ವರ್ಷದವರೆಗೆ ನೀಡುವುದಾಗಿ ಭಾನುವಾರ ಪಕ್ಷ ಭರವಸೆ ನೀಡಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಮತ ಎಣಿಕೆ ನಡೆಯಲಿದೆ. ಮೂರನೇ ಬಾರಿಗೆ ಗದ್ದುಗೆ ಏರಲು ಎಎಪಿ ಹವಣಿಸುತ್ತಿದ್ದು, ಶತಾಯ ಗತಾಯ ಈ ಬಾರಿ ಅಧಿಕಾರಕ್ಕೇರಬೇಕು ಎಂದು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ