
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ನಾಲ್ಕನೇ ದಿನದಂದು ತ್ರಿವೇಣಿ ಸಂಗಮದಲ್ಲಿ 3 ಮಿಲಿಯನ್ ಗೂ ಹೆಚ್ಚು ಭಕ್ತರು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡರು. ಬಿಡುಗಡೆಯಾದ ಅಂಕಿಅಂಶದ ಪ್ರಕಾರ, ಗುರುವಾರ ಸಂಜೆ 6 ಗಂಟೆವರೆಗೂ 3 ಮಿಲಿಯನ್ ಜನರು ಮಹಾ ಕುಂಭಕ್ಕೆ ಭೇಟಿ ನೀಡಿದ್ದು, ಸಂಗಮ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದರಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಸಾಧು ಸಂತರು, 2 ಮಿಲಿಯನ್ ಯಾತ್ರಿಕರಿದ್ದಾರೆ.
ಪ್ರಪಂಚದ ಅತಿ ದೊಡ್ಡ ಧಾರ್ಮಿಕ ಸಭೆಯಲ್ಲಿ 70 ಮಿಲಿಯನ್ ಗೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಜನವರಿ 14 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ 35 ಮಿಲಿಯನ್‌ಗಿಂತಲೂ ಹೆಚ್ಚ ಮಂದಿ ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಗ್ ರಾಜ್ ಆಡಳಿತ AI ಆಧಾರಿತ ಕಂಪ್ಯೂಟರೀಕೃತ ತಪ್ಪಿಸಿಕೊಂಡವರು ಮತ್ತು ಪತ್ತೆಯಾದವರ ಕೇಂದ್ರವನ್ನು ಸ್ಥಾಪಿಸಿದೆ.
ಮಹಾಕುಂಭ ಮೇಳದ ವಿವರಗಳನ್ನು ಸುದ್ದಿಸಂಸ್ಥೆ ANI ಜೊತೆಗೆ ಹಂಚಿಕೊಂಡ ಹೆಚ್ಚುವರಿ ಮೇಳದ ಅಧಿಕಾರಿ ವಿವೇಕ್ ಚತುರ್ವೇದಿ , ಎಐ ಆಧಾರಿತ ತಪ್ಪಿಸಿಕೊಂಡವರ ಮತ್ತು ಪತ್ತೆಯಾದವರ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲಿ ತಪ್ಪಿಸಿಕೊಂಡ ಜನರಿಗೆ ವಸತಿ, ಬಟ್ಟೆ ಮತ್ತು ಆಹಾರಕ್ಕಾಗಿ ಅಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಾವು ಮಕ್ಕಳನ್ನು ಅಥವಾ ಕಳೆದುಹೋದ ಜನರನ್ನು ಅವರ ಸಂಬಂಧಿಕರೊಂದಿಗೆ ಮತ್ತೆ ಸೇರಿಸಲು ಸಾಧ್ಯವಾಗದ ಒಂದೇ ಒಂದು ಪ್ರಕರಣವೂ ಕಂಡುಬಂದಿಲ್ಲ. ಈ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದ್ದೇವೆ ಎಂದು ತಿಳಿಸಿದರು.
ಬುಧವಾರ ಫಿಜಿ, ಫಿನ್ ಲ್ಯಾಂಡ್ ,. ಗಯಾನಾ ಸೇರಿದಂತೆ 10 ರಾಷ್ಟ್ರಗಳಿಂದ 21 ಸದಸ್ಯರ ನಿಯೋಗವೊಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದೆ. ಯೋಗಿ ಸರ್ಕಾರದ ನೇತೃತ್ವದಲ್ಲಿ ಆಯೋಜಿಸಲಾದ ಮಹಾಕುಂಭವು ಈ ವರ್ಷ ಜಾಗತಿಕ ಗಮನ ಸೆಳೆದಿದೆ. ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯುತ್ತದೆ.
ಮುಂದಿನ ಪ್ರಮುಖ ಸ್ನಾನದ ದಿನಗಳು ಜನವರಿ 29 (ಮೌನಿ ಅಮಾವಾಸ್ಯೆ - ಎರಡನೇ ಶಾಹಿ ಸ್ನಾನ), ಫೆಬ್ರವರಿ 3 (ಬಸಂತ್ ಪಂಚಮಿ - ಮೂರನೇ ಶಾಹಿ ಸ್ನಾನ), ಫೆಬ್ರವರಿ 12 (ಮಾಘಿ ಪೂರ್ಣಿಮಾ), ಮತ್ತು ಫೆಬ್ರವರಿ 26 (ಮಹಾ ಶಿವರಾತ್ರಿ)
Advertisement