
ಮೀರತ್: 2017 ರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯ ಮೂತ್ರಪಿಂಡವನ್ನು ತೆಗೆದ ಆರೋಪದ ಮೇಲೆ ಮೀರತ್‌ನ ಖಾಸಗಿ ಆಸ್ಪತ್ರೆಯ ನಿರ್ದೇಶಕ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಕವಿತಾ ದೇವಿ ದೂರಿನ ಮೇಲೆ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಅಕ್ರಮ ಅಂಗಾಂಗ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಸೆಕ್ಷನ್ 156(3) ಅಡಿಯಲ್ಲಿ ನರ್ಸೋನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ನಗರ) ಶಂಕರ್ ಪ್ರಸಾದ್ ಅವರು ತಿಳಿಸಿದ್ದಾರೆ.
2017 ರಲ್ಲಿ ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ತನ್ನ ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ ಎಂದು ದೂರುದಾರ ಕವಿತಾ ದೇವಿ ಆರೋಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ದೂರಿನ ಪ್ರಕಾರ, 2017 ರಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾದ ಕವಿತಾ ದೇವಿ ಅವರು ಮೀರತ್‌ನ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಪಡೆದರು. ಆಂತರಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದ ವೈದ್ಯರು ನನಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ನಾನು ಮೇ 20, 2017 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಮತ್ತು ನಾಲ್ಕು ದಿನಗಳ ನಂತರ ಬಿಡುಗಡೆಯಾದೆ. ಆದಾಗ್ಯೂ, ವರ್ಷಗಳು ಕಳೆದರೂ ನನ್ನ ಸ್ಥಿತಿ ಸುಧಾರಿಸದಿದ್ದಾಗ, 2022 ರಲ್ಲಿ ಹೆಚ್ಚಿನ ಪರೀಕ್ಷೆಗೆ ಒಳಗಾದಾಗ ನನ್ನ ಎಡ ಮೂತ್ರಪಿಂಡ ಕಾಣೆಯಾಗಿರುವುದು ತಿಳಿದುಬಂದು" ಎಂದು ಹೇಳಿದ್ದಾರೆ.
ನಂತರ ಆಸ್ಪತ್ರೆ ಸಿಬ್ಬಂದಿ ಎರಡೂ ಮೂತ್ರಪಿಂಡಗಳು ಸರಿಯಾಗಿವೆ ಎಂದು ತೋರಿಸುವ ನಕಲಿ ವರದಿಗಳೊಂದಿಗೆ ನನ್ನನ್ನು ದಾರಿ ತಪ್ಪಿಸಿದರು. ಈ ಸಂಬಂಧ ನಾವು ಕೇಸ್ ದಾಖಲಿಸಲು ಮುಂದಾದಾಗ ಆಸ್ಪತ್ರೆ ಸಿಬ್ಬಂದಿ ನನ್ನ ಗಂಡ ಮತ್ತು ನನ್ನನ್ನು ಬೆದರಿಸಿದರು. ನಾವು ಪ್ರಕರಣವನ್ನು ಹಿಂಪಡೆಯದಿದ್ದರೆ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು" ಮಹಿಳೆ ಆರೋಪಿಸಿದ್ದಾರೆ.
ಕೆಎಂಸಿ ಆಸ್ಪತ್ರೆಯ ನಿರ್ದೇಶಕ ಡಾ. ಸುನೀಲ್ ಗುಪ್ತಾ ಮತ್ತು ಅವರ ಪತ್ನಿ ಸೇರಿದಂತೆ ಇತರರು ಅಕ್ರಮ ಅಂಗಾಂಗ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ.
"ನಮ್ಮ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ದೂರುದಾರ ಮಹಿಳೆ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದಕ್ಕೆ ಅವರ ಬಳಿ ಡಿಸ್ಚಾರ್ಜ್ ಕಾರ್ಡ್‌ನಂತಹ ಯಾವುದೇ ಪುರಾವೆಗಳಿಲ್ಲ" ಎಂದು ಆಸ್ಪತ್ರೆ ನಿರ್ದೇಶಕ ಡಾ. ಗುಪ್ತಾ ಹೇಳಿದ್ದಾರೆ.
Advertisement