
ಮುಂಬೈ: ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ನಟನ ಮೇಲೆ ನಡೆದ ಚಾಕು ಇರಿತ ಪ್ರಕರಣ ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದೆ. ಸೈಫ್ ಅಲಿಖಾನ್ ಅವರಿಗೆ 6 ಬಾರಿ ಚಾಕುವಿನಿಂದ ಇರಿಯಲಾಗಿದೆ. ಚೂರಿ ಇರಿತದಿಂದಾಗಿ ಸೈಫ್ ಅಲಿಖಾನ್ ಅವರ ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯವಾಗಿದೆ.
ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್ ಅಲಿ ಅವರಿಗೆ, ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಇಡೀ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಊಹಾಪೋಹಗಳೇ ಹರಿದಾಡುತ್ತಿವೆ. ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿರುವಾಕೆ ಪೊಲೀಸರಲ್ಲಿ ಹೇಳಿದಂತೆ ಆ ಕಳ್ಳ ಒಂದು ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ.
ಬುಧವಾರ ತಡರಾತ್ರಿ 2.30ರ ಹೊತ್ತಿಗೆ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸದಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು. ತೀವ್ರವಾಗಿ ಗಾಯಗೊಂಡ ಸೈಫ್ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದರೋಡೆ ಯತ್ನದಲ್ಲಿ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ವೇಳೆ ಕರೀನಾ ಕಪೂರ್, ಅವರ ಇಬ್ಬರು ಮಕ್ಕಳಾದ ಜೆಹ್ ಹಾಗೂ ತೈಮೂರ್ ಕೂಡ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಮೊದಲಿಗೆ ಸೈಫ್ ಎರಡನೇ ಪುತ್ರ ಜೆಹ್ ರೂಮಿನ ಒಳಗೆ ನುಗ್ಗಿದ್ದಾನೆ. ಮಗುವಿನ ಹತ್ತಿರ ಹೋಗುತ್ತಿದ್ದಂತೆ ರೂಮಿನ ನೆಲದ ಮೇಲೆ ಮಲಗಿದ್ದ ಕೆಲಸದಾಕೆ ಕೂಗಲು ಶುರು ಮಾಡಿದ್ದಾರೆ. ಈ ವೇಳೆ ಬ್ಲೇಡ್ ನಿಂದ ಹಲ್ಲೆ ನಡೆಸಿರುವ ಆರೋಪಿ, ಶಬ್ದ ಮಾಡದಂತೆ ಬೆದರಿಸಿದ್ದಾನೆ. ನಿನಗೇನು ಬೇಕೆಂದು ಕೇಳಿದಾಗ ರೂ.1 ಕೋಟಿ ಕೇಳಿದ್ದ. ಇದೇ ವೇಳೆ ಸೈಫ್ ಹಾಗೂ ಕರೀನಾ ಅವರು ಕೂಡ ಸ್ಥಳಕ್ಕೆ ಬಂದು ರಕ್ಷಣೆಗೆ ಧಾವಿಸಿದರು. ಈ ವೇಳೆ ಸೈಫ್ ಅವರ ಮೇಲೆ ಹಲ್ಲೆ ನಡೆಸಿದ. ಬಳಿಕ ಮನೆಯ ಇತರರು ಎಚ್ಚರಗೊಳ್ಳಲು ಆರಂಭವಾದಾಗ ಸ್ಥಳದಿಂದ ಪರಾರಿಯಾದ ಎಂದು ಕೆಲಸದಾಕೆ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.
ಇನ್ನು ಘಟನೆಗೆ ರಾಜಕೀಯ, ಚಿತ್ರರಂಗದ ಹಲವು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ನಟ ಚಿರಂಜೀವಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಹಲವರು ಕಾನೂನು-ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಪ್ರಸಿದ್ಧ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಬಗ್ಗೆ ಕೇಳುತ್ತಿರುವುದು ಕಳವಳಕಾರಿ ತಂದಿದೆ. ನಟ ಶೀಘ್ರ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತೇನೆ, ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ನಂಬುತ್ತೇನೆಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಮೇಲಿನ ದಾಳಿಯ ಬಗ್ಗೆ ಕೇಳಿ ಆಘಾತವಾಗಿದೆ. ಈ ಕಷ್ಟದ ಸಮಯದಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಮತ್ತು ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಕೇಜ್ರಿವಾಲ್ ಅವರು ಹೇಳಿದ್ದಾರೆ.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಸೈಫ್ ಅಲಿ ಖಾನ್ ಅವರಂತಹ ಸೆಲೆಬ್ರಿಟಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಸಾಮಾನ್ಯ ಜನರಿಗೆ ಹೇಗೆ ರಕ್ಷಣೆ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇಂತಹ ದಾಳಿಗಳು ಹೊಸದಲ್ಲ, ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬಾಬಾ ಸಿದ್ದಿಕ್ ಹತ್ಯೆಯು ದೇಶದ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಗಡಿ, ದೇಶ, ರಾಷ್ಟ್ರ ರಾಜಧಾನಿ ಮತ್ತು ಭಾರತದ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಮೋದಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ ಎಂದು ಆಗ್ರಹಿಸಿದ್ದಾರೆ
Advertisement