
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದ 2 ದಿನಗಳ ಬಳಿಕ ಚತ್ತೀಸ್ ಗಢದಲ್ಲಿ ಶಂಕಿತನನ್ನು ಬಂಧಿಸಲಾಗಿದೆ.
31 ವರ್ಷದ ಆಕಾಶ್ ಕೈಲಾಶ್ ಕನ್ನೋಜಿಯಾ ಬಂಧಿತ ಆರೋಪಿಯಾಗಿದ್ದು, ಆತನನ್ನು ದುರ್ಗ್ ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬೈ ಪೊಲೀಸರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಜೊತೆ ಶಂಕಿತ ವ್ಯಕ್ತಿಯ ಫೋಟೋವನ್ನು ಹಂಚಿಕೊಂಡಿದ್ದರು. ಈ ವ್ಯಕ್ತಿ, ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ನಿಂದ ಕೋಲ್ಕತ್ತಾ ಶಾಲಿಮಾರ್ ನಡುವೆ ಚಲಿಸುವ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ವ್ಯಕ್ತಿ ಆಕಾಶ್ ಕೈಲಾಶ್ ಕನ್ನೋಜಿಯಾ 'ಇನ್ನೂ ಶಂಕಿತ' ಎಂದು ಮುಂಬೈ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದು, ಸೂಕ್ತ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶುಕ್ರವಾರದಂದು, Saif Ali Khan ಮಾಲಿಕತ್ವದ ಕಟ್ಟಡದ ಸಿಸಿಟಿವಿ ದೃಶ್ಯಗಳಲ್ಲಿ ಶಂಕಿತ ಹಲ್ಲೆಕೋರನಂತೆ ಕಾಣುತ್ತಿದ್ದ ಬಡಗಿಯನ್ನು (carpenter) ಬಂಧಿಸಲಾಗಿತ್ತು, ಆದರೆ ಅಪರಾಧಕ್ಕೂ ಅವನಿಗೆ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದ ಕಾರಣ ನಂತರ ಆತನನ್ನು ಬಿಡುಗಡೆ ಮಾಡಲಾಯಿತು.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ 54 ವರ್ಷದ ಸೈಫ್ ಅಲಿ ಖಾನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು-ಮೂರು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ದಾಳಿಕೋರನನ್ನು ಬಂಧಿಸಲು 30 ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡ ಮುಂಬೈ ಪೊಲೀಸರು, ಮಧ್ಯಾಹ್ನ 12.30 ರ ಸುಮಾರಿಗೆ ದುರ್ಗ್‌ನಲ್ಲಿರುವ ಆರ್‌ಪಿಎಫ್‌ಗೆ ಆ ವ್ಯಕ್ತಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ ಎಂಬ ಮಾಹಿತಿ ನೀಡಿದರು.
ಆರ್‌ಪಿಎಫ್ ದುರ್ಗ್ ರಾಜನಂದಗಾಂವ್ ನಿಲ್ದಾಣದಲ್ಲಿ (ಇದು ಮುಂಬೈ-ಹೌರಾ ಮಾರ್ಗದಲ್ಲಿ ದುರ್ಗ್‌ಗೆ ಮೊದಲು ಬರುತ್ತದೆ) ತನ್ನ ಕಚೇರಿಗೆ ಎಚ್ಚರಿಕೆ ನೀಡಿತು ಆದರೆ ರೈಲು ಅಲ್ಲಿ ನಿಂತಾಗ ಶಂಕಿತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಆರ್‌ಪಿಎಫ್ ಅಧಿಕಾರಿ ತಿಳಿಸಿದ್ದಾರೆ. ಅಂತಿಮವಾಗಿ ದುರ್ಗ್ ನಿಲ್ದಾಣದ ಮುಂಭಾಗದ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಆತ ಪತ್ತೆಯಾಗಿದ್ದಾನೆ.
ಶುಕ್ರವಾರ, ಮುಂಬೈ ಪೊಲೀಸರು ಘಟನೆಯ ನಂತರ ಆರೋಪಿ ದಾದರ್‌ನ ಮೊಬೈಲ್ ಅಂಗಡಿಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು.
"ಶಂಕಿತ ಆರೋಪಿ 50 ರೂ.ಗೆ ಇಯರ್‌ಫೋನ್‌ಗಳನ್ನು ಖರೀದಿಸಿದ್ದ, ಎಂದು 'ಇಕ್ರಾ' ಅಂಗಡಿಯಲ್ಲಿ ಕೆಲಸ ಮಾಡುವ ಹಸನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಗುರುವಾರ ಮುಂಜಾನೆ ಮುಂಬೈನ ದುಬಾರಿ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ 'ಸತ್ಗುರು ಶರಣ್' ಕಟ್ಟಡದಲ್ಲಿರುವ ತನ್ನ 12 ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಸೈಫ್ ಅಲಿ ಖಾನ್ ಅವರನ್ನು ವ್ಯಕ್ತಿಯೋರ್ವ ಹಲವು ಬಾರಿ ಇರಿದಿದ್ದಾನೆ.
"ಪ್ರಾಥಮಿಕ ತನಿಖೆಯ ಪ್ರಕಾರ, ಒಳನುಗ್ಗುವವನು ಯಾವುದೇ ಗ್ಯಾಂಗ್‌ಗಾಗಿ ಕೆಲಸ ಮಾಡುತ್ತಿರಲಿಲ್ಲ. ಅವನು ಯಾರ ಮನೆಗೆ ಪ್ರವೇಶಿಸಿದ್ದಾನೆಂಬುದೂ ಅವನಿಗೆ ಬಹುಶಃ ತಿಳಿದಿರಲಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಬೆಳಗಿನ ಜಾವ 2.30 ರ ಸುಮಾರಿಗೆ ಶಂಕಿತ ಆಕ್ರಮಣಕಾರ ಕೆಂಪು ಸ್ಕಾರ್ಫ್ ಧರಿಸಿ 'ಸತ್ಗುರು ಶರಣ್' ನ ಆರನೇ ಮಹಡಿಯಿಂದ ಮೆಟ್ಟಿಲುಗಳನ್ನು ಇಳಿದು ಓಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ.
Advertisement