
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಪ್ರಮುಖ ಆರೋಪಿ ಬಂಧನ ಬಗ್ಗೆ ಪೊಲೀಸರು ಇಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಮಾಹಿತಿ ನೀಡಿದ್ದಾರೆ. ಥಾಣೆಯ ಘೋಡ್‌ಬಂದರ್ ರಸ್ತೆಯಲ್ಲಿರುವ ಹಿರಾನಂದಾನಿ ಎಸ್ಟೇಟ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಆತನಿಗೆ ತಾನು ಬಾಲಿವುಡ್ ತಾರೆಯೊಬ್ಬರ ಮನೆಯೊಳಗೆ ಪ್ರವೇಶಿಸಿದ್ದೇನೆ ಎಂಬುದು ಗೊತ್ತಿರಲಿಲ್ಲ, ಅವನ ಉದ್ದೇಶ ಕೇವಲ ಕಳ್ಳತನವಾಗಿತ್ತು ಎಂದು ಡಿಸಿಪಿ ದೀಕ್ಷಿತ್‌ಕುಮಾರ್ ಅಶೋಕ್ ಗೆದಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಥಾಣೆ ಪಕ್ಕದ ಪ್ರದೇಶದಿಂದ ಬಂಧಿಸಲ್ಪಟ್ಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಾಂಗ್ಲಾದೇಶದವನಾಗಿದ್ದು, ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನಿಂದ ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ.
ಅವನು ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಅಲಿಯಾಸ್‌ಗಳನ್ನು ಬಳಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅವನು ಐದು ತಿಂಗಳಿಗೂ ಹೆಚ್ಚು ಕಾಲದಿಂದ ಮುಂಬೈನಲ್ಲಿ ವಾಸಿಸುತ್ತಾ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು. ನಂತರ ಮನೆಗೆಲಸದ ಸಂಸ್ಥೆಗೆ ಸೇರಿದ್ದನು ಎಂದು ತನಿಖೆ ವೇಳೆ ತಿಳಿದುಬಂದಿದೆ. ಈತ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಬಳಸಿದ ದಾಖಲೆಗಳನ್ನು ಸಂಗ್ರಹಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಹೈ ಪ್ರೊಫೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬಂಧನಗಳ ನಂತರ ಈ ಬಂಧನ ನಡೆದಿದೆ. ಮುಂಬೈ ಪೊಲೀಸರು ಛತ್ತೀಸ್‌ಗಢದಲ್ಲಿ ಮತ್ತೊಬ್ಬ ಶಂಕಿತ ಆಕಾಶ್ ಕನೋಜಿಯಾನನ್ನು ಬಂಧಿಸಿದ್ದರು. ಸುಮಾರು 32 ವರ್ಷ ವಯಸ್ಸಿನ ಕನೋಜಿಯಾನನ್ನು ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರಾಯ್‌ಪುರ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ತಡೆಯಿತು.
ನಂತರ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹೆಚ್ಚಿನ ತನಿಖೆ ನಡೆಸಿದಾಗ ಆತ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ, ಮುಂಬೈನಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗಿತ್ತು, ಆದರೆ ಈ ವ್ಯಕ್ತಿಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Advertisement