
ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ ಜಾತಿಗಣತಿಯನ್ನು "ನಕಲಿ" ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎನ್ ಡಿಎ ನಾಯಕರು ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಶನಿವಾರ ಪಾಟ್ನಾದಲ್ಲಿ ನಡೆದ 'ಸಂವಿಧಾನ ಉಳಿಸಿ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, 2022-2023ರಲ್ಲಿ ಬಿಹಾರದಲ್ಲಿ ನಡೆಸಲಾದ ಜಾತಿ ಆಧಾರಿತ ಸಮೀಕ್ಷೆಯನ್ನು ಉಲ್ಲೇಖಿಸಿ, ಜಾತಿ ಸಮೀಕ್ಷೆಯ ಹೆಸರಿನಲ್ಲಿ ಬಿಹಾರದ ಜನರನ್ನು ಮೂರ್ಖರನ್ನಾಗಿ ಮಾಡಲಾಯಿತು. ಕಾಂಗ್ರೆಸ್ ಯಾವುದೇ ಬೆಲೆ ತೆತ್ತಾದರೂ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ನಡೆಸುತ್ತದೆ ಎಂದು ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರ ಬಿಜೆಪಿ ಮುಖ್ಯಸ್ಥರೂ ಆಗಿರುವ ಸಚಿವ ದಿಲೀಪ್ ಜೈಸ್ವಾಲ್, ಜಾತಿ ಗಣತಿ ನಡೆಸುವ ಮೊದಲು ರಾಹುಲ್ ಗಾಂಧಿ ಯಾವ ಜಾತಿಗೆ ಸೇರಿದವರು ಎಂಬುದನ್ನು ನಮಗೆ ತಿಳಿಸಬೇಕು ಎಂದು ಲೇವಡಿ ಮಾಡಿದ್ದಾರೆ.
ಜೆಡಿಯುನ ರಾಜ್ಯ ಸಚಿವ ವಿಜಯ್ ಕುಮಾರ್ ಚೌಧರಿ, ಭಾರತ ಸರ್ಕಾರ ಮತ್ತು ಭಾರತೀಯ ರಾಜ್ಯದ ನಡುವೆ ವ್ಯತ್ಯಾಸವನ್ನು ತೋರಿಸಲು ಸಾಧ್ಯವಾಗದ ರಾಜಕಾರಣಿಯಿಂದ ನಾವು ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಅವರ ಮತ್ತೊಂದು ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಸೈಯದ್ ಶಹನವಾಜ್ ಹುಸೇನ್ ಇದೇ ರೀತಿ ಹೇಳಿದ್ದಾರೆ. ಇಲ್ಲಿಯವರೆಗೂ ಬಿಹಾರದ ಜಾತಿ ಸಮೀಕ್ಷೆಯ ಕ್ರೆಡಿಟ್ ಹೇಳುತ್ತಿದ್ದ ರಾಹುಲ್ ಗಾಂಧಿ ಇದೀಗ ನಕಲಿ ಎಂದು ಕರೆದಿರುವುದು ದಿಗ್ಭ್ರಮೆ ಮೂಡಿಸಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 2023 ರಲ್ಲಿ ಬಿಹಾರದಲ್ಲಿ ಜಾತಿ ಸಮೀಕ್ಷೆ ಬಹಿರಂಗವಾದಾಗ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷವಾಗಿತ್ತು. ಸಮೀಕ್ಷೆಯಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ಜನಸಂಖ್ಯೆಯ ಶೇಕಡಾವಾರು ಹೆಚ್ಚಳವನ್ನು ಎತ್ತಿ ತೋರಿಸಿತ್ತು. ಸಮೀಕ್ಷಾ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಆರ್ ಜೆಡಿ- ಕಾಂಗ್ರೆಸ್ ಮೈತ್ರಿ ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿದರು.
Advertisement