
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳದ ಏಳನೇ ದಿನವಾದ ಭಾನುವಾರ ಸಂಗಮದಲ್ಲಿ ಸುಮಾರು 5 ಮಿಲಿಯನ್ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸಂಜೆ 6 ಗಂಟೆಯವರೆಗೂ ಸುಮಾರು 5. 182 ಮಿಲಿಯನ್ ಭಕ್ತರು, 1 ಮಿಲಿಯನ್ ಸಾಧು-ಸಂತರು ಸ್ನಾನ ಮಾಡಿದ್ದಾರೆ. ಈ ಬಾರಿಯ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೂ ಒಟ್ಟಾರೇ 77.2 ಮಿಲಿಯನ್ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಇಂದು ಬೆಳಗ್ಗೆ ದಟ್ಟು ಮಂಜು ಮುಸುಕಿದ ವಾತವಾರಣ ಕಂಡುಬಂದರೂ ಭಕ್ತರು ಎದೆಗುಂದಲಿಲ್ಲ. ಕೊರೆಯುವ ಚಳಿಯಲ್ಲೂ ಸಂಗಮದಲ್ಲಿ ಮಿಂದೆದ್ದರು. ಮುಂದಿನ ದಿನಗಳಲ್ಲಿ ನಾಲ್ಕು ಪ್ರಮುಖ ಶಾಹಿ ಸ್ನಾನಗಳಿದ್ದು, ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳ ಫೆಬ್ರವರಿ 26 ರ ಮಹಾಶಿವರಾತ್ರಿವರೆಗೂ ಮುಂದುವರೆಯಲಿದೆ.
ಮುಂದಿನ ಪ್ರಮುಖ ಶಾಹಿ ಸ್ನಾನದ ದಿನಗಳು: ಜನವರಿ 29 (ಮೌನಿ ಅಮಾವ್ಯಾಸೆ- 2ನೇ ಶಾಯಿ ಸ್ನಾನ) ಫೆಬ್ರವರಿ 3 (ಬಸಂತ್ ಪಂಚಮಿ-ಮೂರನೇ ಶಾಹಿ ಸ್ನಾನ) ಫೆಬ್ರವರಿ 12 (ಮಾಘಿ ಪೂರ್ಣಿಮೆ) ಫೆಬ್ರವರಿ 26 (ಮಹಾ ಶಿವರಾತ್ರಿ)
ಈ ಮಧ್ಯೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಮಹಾಕುಂಭ ಮೇಳ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಮಾರ್ಥ ನಿಕೇತನ ಕುಂಭಮೇಳ ಶಿಬಿರಕ್ಕೆ ಭೇಟಿ ನೀಡಿದ್ದಾರೆ.
Advertisement