Greeshma-Sharon (file photo)
ಗ್ರೀಷ್ಮಾ-ಶರೋನ್(ಸಂಗ್ರಹ ಚಿತ್ರ)

ಶರೋನ್ ರಾಜ್ ಹತ್ಯೆ ಪ್ರಕರಣ: ಬಾಯ್ ಫ್ರೆಂಡ್ ಕೊಲೆಗೈದ ಗ್ರೀಷ್ಮಾಗೆ ಕೇರಳ ಕೋರ್ಟ್ ಮರಣದಂಡನೆ ಶಿಕ್ಷೆ ಪ್ರಕಟ

ಕೊಲೆ, ಅಪಹರಣ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಹೊರಿಸಲಾದ ಎಲ್ಲಾ ಆರೋಪಗಳಲ್ಲಿ ಗ್ರೀಷ್ಮಾ ತಪ್ಪಿತಸ್ಥನೆಂದು ನ್ಯಾಯಾಲಯವು ಈ ಹಿಂದೆ ಘೋಷಿಸಿತ್ತು.
Published on

ತಿರುವನಂತಪುರಂ: 2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್‌ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ ಆರೋಪದ ಮೇಲೆ ಕನ್ಯಾಕುಮಾರಿ ಜಿಲ್ಲೆಯ ರಾಮವರ್ಮಂಚಿರದ 24 ವರ್ಷದ ಮಹಿಳೆ ಗ್ರೀಷ್ಮಾಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಎ ಎಂ ಬಶೀರ್ ಅವರು ವಾದ ವಿವಾದ ಆಲಿಸಿದ ನಂತರ ತೀರ್ಪು ನೀಡಿ, ಇದು ಅಪರೂಪದ ಪ್ರಕರಣ, ಸರಿಯಾಗಿ ಪೂರ್ವನಿಯೋಜಿತವಾಗಿ ನಡೆಸಿದ ಅಪರಾಧ ಕೃತ್ಯವಾಗಿದೆ ಎಂದು ತೀರ್ಮಾನಿಸಿದರು. ಆರೋಪಿಯು ಆಕೆಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಕಾರಣದಿಂದಾಗಿ ಯಾವುದೇ ವಿನಾಯ್ತಿಗೆ ಅರ್ಹಳಲ್ಲ ಎಂದು ತೀರ್ಪು ನೀಡಿದರು. ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂದು ಕಂಡುಬರುತ್ತಿದೆ ಎಂದರು.

ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಕಣ್ಣೀರು ಸುರಿಸಿದರು. ಕೊಲೆ, ಅಪಹರಣ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಹೊರಿಸಲಾದ ಎಲ್ಲಾ ಆರೋಪಗಳಲ್ಲಿ ಗ್ರೀಷ್ಮಾ ತಪ್ಪಿತಸ್ಥನೆಂದು ನ್ಯಾಯಾಲಯವು ಈ ಹಿಂದೆ ಘೋಷಿಸಿತ್ತು.

ಗ್ರೀಷ್ಮಾ ಮತ್ತು ಶರೋನ್

ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

23 ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್, ಅಕ್ಟೋಬರ್ 14, 2022 ರಂದು ತೀವ್ರ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದನು. ಆತನ ಗೆಳತಿ ಗ್ರೀಷ್ಮಾ ಮಾರಕ ಮಿಶ್ರಣ ನೀಡಿದ ನಂತರ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದನು.

ಪ್ಯಾರಾಕ್ವಾಟ್ ಡೈಕ್ಲೋರೈಡ್ ನ್ನು ಆಯುರ್ವೇದ ಔಷಧದೊಂದಿಗೆ ಬೆರೆಸಿದ ವಿಷವನ್ನು ಸೇವಿಸಿದ ನಂತರ ಶರೋನ್ ನ ಯಕೃತ್ತು, ಮೂತ್ರಪಿಂಡ ಮತ್ತು ಶ್ವಾಸಕೋಶಗಳಿಗೆ ತೀವ್ರ ಹಾನಿಯಾಗಿತ್ತು. 11 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದನು.

ಪೊಲೀಸರು ತೀವ್ರ ತನಿಖೆ ನಡೆಸಿದಾಗ ನಾಗರಕೋಯಿಲ್‌ನ ಸೇನಾಧಿಕಾರಿಯನ್ನು ಮದುವೆಯಾಗುವ ಆಸೆಯಿಂದ ಗ್ರೀಷ್ಮಾ ಶರೋನ್‌ ನ್ನು ತಿರಸ್ಕರಿಸಲು ಈ ರೀತಿ ಮಾಡಿದ್ದರು. ಶರೋನ್ ಮತ್ತು ಗ್ರೀಷ್ಮಾ ಮಧ್ಯೆ 2021ರಲ್ಲಿ ಪ್ರೀತಿ ಚಿಗುರೊಡೆದಿತ್ತು. ಅದಾಗಿ ಒಂದು ವರ್ಷದ ನಂತರ ಗ್ರೀಷ್ಮಾ ಸೇನಾಧಿಕಾರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಶರೋನ್ ಜೊತೆಗಿನ ಸಂಬಂಧವನ್ನು ಮುರಿಯಲು ಬಯಸಿದ್ದರು. ತನ್ನೊಂದಿಗೆ ಸಂಬಂಧ ಮುರಿದುಕೊಳ್ಳುವಂತೆ ಶರೋನ್ ನನ್ನು ಒತ್ತಾಯಿಸಿದ್ದಳು. ಆದರೆ ಅದಕ್ಕೆ ಶರೋನ್ ಒಪ್ಪಿರಲಿಲ್ಲ. ಅಂತಿಮವಾಗಿ ಗ್ರೀಷ್ಮಾ ಶರೋನ್ ನಿಂದ ಅಂತರ ಕಾಯಲು ನಿರ್ಧರಿಸಿದ್ದಳು.

Greeshma-Sharon (file photo)
ಬಾಯ್ ಫ್ರೆಂಡ್ ಬಗ್ಗೆ ಆಕ್ಷೇಪಿಸಿದ್ದಕ್ಕೆ ತಮ್ಮನನ್ನೇ ಹತ್ಯೆ ಮಾಡಿದ ಅಕ್ಕ!

ಕೊಲೆಗೆ ಸಂಚು

ಆಗಸ್ಟ್ 2022 ರಲ್ಲಿ 'ಜ್ಯೂಸ್ ಚಾಲೆಂಜ್' ಎಂಬ ಆಟವಾಡುವ ನೆಪದಲ್ಲಿ ಶರೋನ್ ನನ್ನು ಕೊಲ್ಲಲು ಪ್ರಯತ್ನಿಸಿದಳು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ವಿ ಎಸ್ ವಿನೀತ್ ಕುಮಾರ್ ನ್ಯಾಯಾಲಯದ ಮುಂದೆ ವಾದಿಸಿದ್ದರು. ಹಣ್ಣಿನ ಜ್ಯೂಸ್ ಗೆ 50 ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ಶರೋನ್‌ಗೆ ನೀಡಿದ್ದಳು. ಶರೋನ್ ಜ್ಯೂಸ್ ಕುಡಿದಾಗ ಕಹಿ ರುಚಿಯಿಂದಾಗಿ ಉಗುಳಿದನು. ಆಗ ನಡೆಸಿದ್ದ ಸಂಚು ಫಲ ಕೊಟ್ಟಿರಲಿಲ್ಲ.

ಅದಾಗಿ ಎರಡು ತಿಂಗಳ ನಂತರ, ಅಕ್ಟೋಬರ್‌ 2022ರಲ್ಲಿ ಗ್ರೀಷ್ಮಾ ಶರೋನ್ ನನ್ನು ತನ್ನ ನಿವಾಸಕ್ಕೆ ಕರೆದೊಯ್ದು ವಿಷಕಾರಿ ಕಷಾಯವನ್ನು ಕುಡಿಯಲು ಕೊಟ್ಟಳು. ಶರೋನ್ ಅದನ್ನು ಸೇವಿಸಿದ ತಕ್ಷಣ ವಾಂತಿ ಮಾಡಲಾರಂಭಿಸಿದ್ದನು. ಮನೆಗೆ ವಾಪಾಸ್ ಬರುವಾಗಲು ವಾಂತಿಯಾಗಿತ್ತು. ಈ ಘಟನೆ ನಡೆಯುವಾಗ ಶರೋನ್ ಸ್ನೇಹಿತ ರೆಜಿ ಅಲ್ಲಿದ್ದನು, ಅವನನ್ನು ಸಾಕ್ಷಿಗಳಲ್ಲಿ ಒಬ್ಬನನ್ನಾಗಿ ಪೊಲೀಸರು ಹಾಜರುಪಡಿಸಿದ್ದರು.

ಪ್ರಕರಣದಲ್ಲಿ ಗ್ರೀಷ್ಮ ತಾಯಿ ಸಿಂಧು ಖುಲಾಸೆಗೊಂಡಿರುವುದರ ವಿರುದ್ಧ ನಿರಾಶೆಗೊಂಡಿರುವ ಶರೋನ್ ಪೋಷಕರಾದ ಪ್ರಿಯಾ ಮತ್ತು ಜಯರಾಜ್, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com