ಆರ್ ಜಿ ಕರ್ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ ಕೋರ್ಟ್ ಗಲ್ಲು ಶಿಕ್ಷೆ ನೀಡದಿರಲು ಇದೇ ಕಾರಣ!
ಕೋಲ್ಕತ್ತಾ: ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಕರ್ತವ್ಯ ನಿರತ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಅಪರಾಧಿ ಸಂಜಯ್ ರಾಯ್ ಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆ ಮೇಲೆ ನಡೆಸಿದ ಹೀನಕೃತ್ಯಕ್ಕಾಗಿ ಸಂಜಯ್ ರಾಯ್ ಅವರನ್ನು ತಪಿತಸ್ಥನೆಂದು ಸೀಲ್ದಾಹ್‌ನಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರಿದ್ದ ನ್ಯಾಯಾಲಯ ಶನಿವಾರ ತೀರ್ಪು ನೀಡಿತ್ತು.
ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಇಂದು ಪ್ರಕಟಿಸಲಾಗಿದೆ. ಈ ಅಪರಾಧ 'ಅಪರೂಪದಲ್ಲಿಯೇ ಅಪರೂಪ' ವರ್ಗಕ್ಕೆ ಸೇರದಿರುವುದರಿಂದ ಆರೋಪಿಗೆ ಗಲ್ಲು ಶಿಕ್ಷೆ ನೀಡದಿರುವುದನ್ನು ನ್ಯಾಯಾಧೀಶರಾದ ದಾಸ್ ಸಮರ್ಥಿಸಿಕೊಂಡಿದ್ದಾರೆ.
ಮೃತ ವೈದ್ಯೆಯ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ರಾಜ್ಯಕ್ಕೆ ಸೂಚಿಸಿದೆ.
ಆರೋಪಿ, ಆರೋಪಿ ಪರ ವಕೀಲರು ಹಾಗೂ ಸಂತ್ರಸ್ತೆಯ ಕುಟುಂಬದವರು, ಸಿಬಿಐನ ಅಂತಿಮ ಹೇಳಿಕೆ ಕೇಳಿದ ನಂತರ ನ್ಯಾಯಾಧೀಶರು ಈ ಆದೇಶ ಪ್ರಕಟಿಸಿದ್ದಾರೆ.
ಕೋಲ್ಕತ್ತಾ ಪೋಲೀಸ್‌ನಲ್ಲಿ ಮಾಜಿ ನಾಗರಿಕ ಸ್ವಯಂಸೇವಕರಾಗಿದ್ದ ರಾಯ್ ಅವರನ್ನು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರ), 66 (ಸಾವಿಗೆ ಕಾರಣವಾದ ಶಿಕ್ಷೆ) ಮತ್ತು 103 (1) (ಕೊಲೆ) ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.