
ನವದೆಹಲಿ: ದೆಹಲಿಯ ರೋಹಿಣಿಯಲ್ಲಿರುವ ಕಾಲೇಜೊಂದರ ಒಂಬತ್ತನೇ ಮಹಡಿಯಿಂದ ಜಿಗಿದು 18 ವರ್ಷದ ಬಿ.ಕಾಂ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಾವಿಗೆ ಶರಣಾದ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಪಾರ್ಥ್ ರಾವತ್ ಎಂದು ಗುರುತಿಸಲಾಗಿದ್ದು, ಮಹಾರಾಜ ಅಗ್ರಸೇನ್ ಕಾಲೇಜಿನಲ್ಲಿ ಓದುತ್ತಿದ್ದನು.
ರಾವತ್ ಸೋಮವಾರ ಕಾಲೇಜ್ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು, ದಾರಿ ಮಧ್ಯೆಯೇ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಘೋಷಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಪ್ರಾಥಮಿಕ ತನಿಖೆ ವೇಳೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ. ಆದರೆ ವಿದ್ಯಾರ್ಥಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
Advertisement