
ಮುಂಬೈ: ಮುಂಬೈ ಪೊಲೀಸರು ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಆರೋಪಿಯನ್ನು ಮಂಗಳವಾರ ಬಾಂದ್ರಾದಲ್ಲಿರುವ ನಟನ ನಿವಾಸಕ್ಕೆ ಕರೆದೊಯ್ದು, ಅಪರಾಧದ ಕೃತ್ಯವನ್ನು ಮರುಸೃಷ್ಟಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
20 ಅಧಿಕಾರಿಗಳ ತಂಡ ಇಂದು ಬೆಳಗ್ಗೆ 5.30 ರ ಸುಮಾರಿಗೆ ನಾಲ್ಕು ಪೊಲೀಸ್ ವ್ಯಾನ್‌ಗಳಲ್ಲಿ ಸದ್ಗುರು ಶರಣ್ ಅಪಾರ್ಟ್ ಮೆಂಟ್ ಗೆ ತೆರಳಿತ್ತು ಮತ್ತು ಒಂದು ಗಂಟೆಯ ಕಾಲ ಘಟನೆಯನ್ನು ಮರು ಸೃಷ್ಟಿಸಿದರು ಎಂದು ಅಧಿಕಾರಿ ಹೇಳಿದ್ದಾರೆ.
ಪೊಲೀಸ್ ತಂಡವು ಆರೋಪಿ, ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ನೊಂದಿಗೆ ಮುಂಭಾಗದ ಗೇಟ್ ಮೂಲಕ ಅಪಾರ್ಟ್ ಮೆಂಟ್ ಪ್ರವೇಶಿಸಿತು ಎಂದು ಅವರು ತಿಳಿಸಿದ್ದಾರೆ.
ನಂತರ, ಆರೋಪಿಯನ್ನು ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದರು. ಅಲ್ಲಿಂದ ಆರೋಪಿ ದಾದರ್‌ಗೆ ರೈಲಿನಲ್ಲಿ ಹೋಗಿದ್ದನು ಮತ್ತು ದಾಳಿಯ ನಂತರ ಆರೋಪಿ ಮಲಗಿದ್ದ ಉದ್ಯಾನದ ಹೊರಗಿನ ಸ್ಥಳಕ್ಕೂ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದರು.
ಜನವರಿ 16 ರಂದು ಕಳ್ಳತನ ಮಾಡುವ ಉದ್ದೇಶದಿಂದ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದ ಆರೋಪಿ, ನಟನಿಗೆ ಚಾಕುವಿನಿಂದ ಆರು ಬಾರಿ ಇರಿದಿದ್ದನು.
ವಿಜಯ್ ದಾಸ್ ಎಂದು ಹೆಸರು ಬದಲಾಯಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆ ಫಕೀರ್ ನನ್ನು ಪೊಲೀಸರು ಭಾನುವಾರ ನೆರೆಯ ಥಾಣೆಯಲ್ಲಿ ಬಂಧಿಸಿದ್ದರು.
ಬಾಂದ್ರಾದಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
Advertisement