
ಮುಂಬೈ: ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಂಗ್ಲಾದೇಶದ ಪ್ರಜೆಯು ಏಳು ತಿಂಗಳ ಹಿಂದೆಯೇ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಮತ್ತು ಮುಂಬೈಗೆ ತೆರಳುವ ಮೊದಲು ಸಿಮ್ ಪಡೆಯಲು ಪಶ್ಚಿಮ ಬಂಗಾಳದ ನಿವಾಸಿಯ ಆಧಾರ್ ಕಾರ್ಡ್ ಬಳಸಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಂದ್ರಾದಲ್ಲಿರುವ ಖ್ಯಾತ ಬಾಲಿವುಡ್ ನಟ ಸೈಫ್ ನಿವಾಸದಲ್ಲಿ ಚಾಕು ಇರಿತ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಎಂಬಾತನನ್ನು ಥಾಣೆಯಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದರು.
ಪೊಲೀಸರ ಪ್ರಕಾರ, ವಿಜಯ್ ದಾಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಫಕೀರ್ ಡಾಕಿ ನದಿಯನ್ನು ದಾಟಿ ಏಳು ತಿಂಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದನು. ಆರೋಪಿ ಪಶ್ಚಿಮ ಬಂಗಾಳದಲ್ಲಿ ಕೆಲವು ವಾರ ತಂಗಿದ್ದ. ನಂತರ ಕೆಲಸದ ಹುಡುಕಾಟಕ್ಕಾಗಿ ಮುಂಬೈಗೆ ತೆರಳುವ ಮುನ್ನ ಸಿಮ್ ಕಾರ್ಡ್ ಪಡೆಯಲು ಸ್ಥಳೀಯ ವ್ಯಕ್ತಿಯ ಆಧಾರ್ ಕಾರ್ಡ್ ಅನ್ನು ಬಳಸುತ್ತಿದ್ದ ಎಂದು ತಿಳಿಸಿದ್ದಾರೆ.
ಆರೋಪಿ ಬಳಸುತ್ತಿದ್ದ ಸಿಮ್ ಕಾರ್ಡ್ ಪಶ್ಚಿಮ ಬಂಗಾಳದ ಖುಕುಮೋನಿ ಜಹಾಂಗೀರ್ ಸೇಖಾ ಎಂಬಾತನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫಕೀರ್ ತನ್ನ ಹೆಸರಿನಲ್ಲೇ ಆಧಾರ್ ಕಾರ್ಡ್ ಪಡೆಯಲು ಪ್ರಯತ್ನಿಸಿ ವಿಫಲನಾಗಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈಗೆ ಬಂದು ತಲುಪಿದ್ದ ಆರೋಪಿಯು ಯಾವುದೇ ದಾಖಲೆಗಳನ್ನು ಒದಗಿಸಲು ಅಗತ್ಯವಿಲ್ಲದ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ. ನಂತರ ಕಾರ್ಮಿಕರ ಗುತ್ತಿಗೆದಾರ ಅಮಿತ್ ಪಾಂಡೆ ವರ್ಲಿ ಎಂಬುವವರು ಥಾಣೆಯಲ್ಲಿರುವ ಪಬ್‌ಗಳು ಮತ್ತು ಹೋಟೆಲ್‌ಗಳಲ್ಲಿ ಹೌಸ್‌ಕೀಪಿಂಗ್ ಕೆಲಸವನ್ನು ಪಡೆಯಲು ಸಹಾಯ ಮಾಡಿದ್ದರು.
ಫಕೀರ್‌ನ ಮೊಬೈಲ್ ಅನ್ನು ಪರಿಶೀಲಿಸಿದಾಗ, ಆತ ಬಾಂಗ್ಲಾದೇಶಕ್ಕೆ ಹಲವಾರು ಕರೆಗಳನ್ನು ಮಾಡಿದ್ದಾನೆ ಮತ್ತು ನೆರೆಯ ದೇಶದಲ್ಲಿರುವ ಆತನ ಕುಟುಂಬಕ್ಕೆ ಕರೆ ಮಾಡಲು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
Advertisement