
ಮುಂಬೈ: ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಯ ಪೊಲೀಸ್ ಕಸ್ಟಡಿಯನ್ನು ಜನವರಿ 29ರವರೆಗೆ ವಿಸ್ತರಿಸಿ ಬಾಂದ್ರಾ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಪ್ರಕರಣದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಇತರ ಅಂಶಗಳ ಮೇಲೂ ತನಿಖೆ ಅಗತ್ಯ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಅಪರಾಧವು ಗಂಭೀರವಾಗಿದೆ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುತ್ತದೆ ಎಂದು ಹೇಳಿದೆ.
ಆರೋಪಿಯ ನಿರಪರಾಧಿತ್ವವನ್ನು ಖಚಿತಪಡಿಸಿಕೊಳ್ಳಲು ಇಂತಹ ತನಿಖೆ ಅವಶ್ಯಕವಾಗಿದೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 35ರ ಅಡಿಯಲ್ಲಿ ನೋಟಿಸ್‌ಗೆ ಸಂಬಂಧಿಸಿದ ಸಲ್ಲಿಕೆಗಳು ಅನ್ವಯಿಸುವುದಿಲ್ಲ. ಯಾವುದೇ ದಾಖಲೆಗಳಿಂದ ಬಂಧನ ಕಾನೂನುಬಾಹಿರ ಎಂದು ತೀರ್ಮಾನಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಚಾಕು ಇರಿತ ಪ್ರಕರಣದಲ್ಲಿ ಹೆಚ್ಚಿನ ಸಹಚರರು ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿ, ಮುಂಬೈ ಪೊಲೀಸರು ಆರೋಪಿಯನ್ನು ಮತ್ತಷ್ಟು ದಿನ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ಆರೋಪಿಯು ಅಪರಾಧಕ್ಕೆ ಬಳಸಿದ ಆಯುಧದ ಮೂಲದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಿಸಿಟಿವಿ ಫೂಟೇಜ್‌ನೊಂದಿಗೆ ಮುಖ ಗುರುತಿಸುವಿಕೆ ಪ್ರಕ್ರಿಯೆಯನ್ನು ಮಾಡಬೇಕಾಗಿದೆ ಮತ್ತು ಇದಕ್ಕಾಗಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಅಪರಾಧದ ಸಮಯದಲ್ಲಿ ಆತ ಧರಿಸಿದ್ದ ಶೂಗಳನ್ನು ಇನ್ನೂ ವಶಕ್ಕೆ ಪಡೆಯಬೇಕಾಗಿದೆ' ಎಂದು ಪೊಲೀಸರು ಸೇರಿಸಿದ್ದಾರೆ.
ಆರೋಪಿಯು ಅಪರಾಧದ ವೇಳೆ ಬಳಸಿದ್ದ ಶಾಲನ್ನು (ಗಮ್ಛಾ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement