
ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಮರಾಠ ಮೀಸಲಾತಿ ಕಿಚ್ಚು ಹೊತ್ತಿಕೊಂಡಿದ್ದು, ಮೀಸಲಾತಿಗಾಗಿ ಈ ಹಿಂದೆ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಮನೋಜ್ ಜರಂಗೆ ಈಗ ಮತ್ತೊಮ್ಮೆ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
ಜಾಲ್ನಾ ಮೂಲದ ಸಾಮಾಜಿಕ ಕಾರ್ಯಕರ್ತ ಮನೋಜ್ ಜರಂಗೆ ಅವರು ಮರಾಠರಿಗೆ ಒಬಿಸಿ ಕೋಟಾದಡಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶನಿವಾರ ಮತ್ತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಕಳೆದ 16 ತಿಂಗಳಲ್ಲಿ ಇದು ಅವರ ಏಳನೇ ಉಪವಾಸ ಸತ್ಯಾಗ್ರಹವಾಗಿದೆ.
ತಮ್ಮ ಕೋಟಾ ಬೇಡಿಕೆಯ ಜೊತೆಗೆ, ಸರಪಂಚ್ ಸಂತೋಷ್ ದೇಶಮುಖ್ ಅವರ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಜರಂಗೆ ಆಗ್ರಹಿಸಿದ್ದಾರೆ.
ಕುಂಬಿ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ(ಒಬಿಸಿ) ವರ್ಗದಡಿಯಲ್ಲಿ ಮರಾಠ ಮೀಸಲಾತಿ ನೀಡಿದ್ದಕ್ಕಾಗಿ ಅವರನ್ನು ಮರಾಠಾ ಸಮುದಾಯದ ರಕ್ತಸಂಬಂಧಿಗಳು ಎಂದು ಗುರುತಿಸುವ ಕರಡು ಅಧಿಸೂಚನೆಯನ್ನು ಜಾರಿಗೆ ತರಬೇಕೆಂದು ಜರಂಗೆ ಒತ್ತಾಯಿಸಿದ್ದಾರೆ.
ಬೀಡ್ ಜಿಲ್ಲೆಯ ಮಸಾಜೋಗ್ ಗ್ರಾಮದ ಸರಪಂಚ್ ಸಂತೋಷ್ ದೇಶಮುಖ್ ಅವರನ್ನು ಡಿಸೆಂಬರ್ 9, 2024 ರಂದು ಅಪಹರಿಸಿ, ಚಿತ್ರಹಿಂಸೆ ನೀಡಿ, ಹತ್ಯೆ ಮಾಡಲಾಗಿದೆ. ಪೊಲೀಸರು ಇದುವರೆಗೆ ಏಳು ಜನರನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಜರಂಗೆ ಆಗ್ರಹಿಸಿದ್ದಾರೆ.
ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜರಂಗೆ, ಮರಾಠಾ ಸಮುದಾಯದ ಬೇಡಿಕೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಿಹರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
Advertisement