
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳದ ವೇಳೆ ಸಂಗಮದಲ್ಲಿ ಸ್ನಾನ ಮಾಡಲು ವಿವಿಧ ದೇಶಗಳ ರಾಯಭಾರಿಗಳು ಆಗಮಿಸುತ್ತಿದ್ದಾರೆ.
ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳು ಸೇರಿದಂತೆ 73 ದೇಶಗಳ ರಾಜತಾಂತ್ರಿಕರು ಇದೇ ಮೊದಲ ಬಾರಿಗೆ ಕುಂಭ ಮೇಳದಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದು, ಅವರು ಫೆಬ್ರವರಿ 1 ರಂದು ಬರಲಿದ್ದಾರೆ ಎಂದು ಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ಖಚಿತಪಡಿಸಿದ್ದಾರೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA)ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದು, ಜಪಾನ್, ಯುಎಸ್ಎ, ರಷ್ಯಾ, ಉಕ್ರೇನ್, ಜರ್ಮನಿ, ನೆದರ್ಲ್ಯಾಂಡ್ಸ್, ಕ್ಯಾಮರೂನ್, ಕೆನಡಾ, ಸ್ವಿಟ್ಜರ್ಲೆಂಡ್, ಸ್ವೀಡನ್, ಪೋಲೆಂಡ್, ಬೊಲಿವಿಯಾ ಸೇರಿದಂತೆ ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು ಮಹಾ ಕುಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲಾ ವಿದೇಶಿ ರಾಜತಾಂತ್ರಿಕರು ದೋಣಿ ಮೂಲಕ ಸಂಗಮ ತಲುಪಲಿದ್ದು, ಪವಿತ್ರ ಸ್ನಾನ ಮಾಡುತ್ತಾರೆ. ತದನಂತರ ಅವರು ಅಕ್ಷಯವತ್ ಮತ್ತು ಬಡೇ ಹನುಮಾನ್ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ. ಡಿಜಿಟಲ್ ಮಹಾಕುಂಭ ಅನುಭವ ಕೇಂದ್ರದಲ್ಲಿ ಮಹಾ ಕುಂಭ ಮೇಳ ಕುರಿತು ಅರಿತುಕೊಳ್ಳಲಿದ್ದಾರೆ. ಎಂಇಎ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ರಾಜತಾಂತ್ರಿಕರಿಗೆ ಸುಗಮ ಅನುಭವ ಖಾತ್ರಿಗಾಗಿ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Advertisement