
ನವದೆಹಲಿ: ಕಷ್ಟ ಪಟ್ಟು ಓದಿಸಿದ ಗಂಡನನ್ನು ತೊರೆದು ಅಧಿಕಾರಿಯೋರ್ವನನ್ನು ಮದುವೆಯಾದ ಜ್ಯೋತಿ ಮೌರ್ಯ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಜಸ್ತಾನದಲ್ಲಿ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಗಂಡ ಭರ್ಜರಿ ಶಾಕ್ ನೀಡಿದ್ದಾನೆ.
ಹೌದು.. ಈ ಹಿಂದೆ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಪ್ರಕರಣ ದೇಶಾದ್ಯಂತ ವ್ಯಾಪಕ ಸಂಚಲನ ಸೃಷ್ಟಿಸಿತ್ತು. ಪ್ಯೂನ್ ಆಗಿದ್ದ ಪತಿ, ಯಾವುದೇ ಬೆಲೆ ತೆತ್ತಾದರೂ ತನ್ನ ಹೆಂಡತಿಗೆ ಉನ್ನತ ಶಿಕ್ಷಣ ಕೊಡಿಸಿ ಆಕೆಯನ್ನು ದೊಡ್ಡ ಅಧಿಕಾರಿ ಮಾಡ ಬಯಸಿದ್ದರು. ಯೋಜಿಸಿದಂತೆ, ಆತ ತನ್ನ ಪತ್ನಿ ಜ್ಯೋತಿ ಮೌರ್ಯಗೆ ಉನ್ನತ ಶಿಕ್ಷಣ ನೀಡಿದ್ದು ಮಾತ್ರವಲ್ಲದೇ ಆಕೆ ಸರ್ಕಾರಿ ಕೆಲಸ ಸಿಗುವವರೆಗೂ ತನ್ನ ಸಂಪಾದನೆ ವೆಚ್ಚ ಮಾಡಿದ್ದ. ಕೊನಗೂ ಆತನ ಕಠಿಣ ಪರಿಶ್ರಮ ಮತ್ತು ಜ್ಯೋತಿ ಮೌರ್ಯ ಪ್ರಯತ್ನಗಳು ಫಲ ನೀಡಿದವು.
ಆಕೆಗೆ ಸರ್ಕಾರಿ ಕೆಲಸ ಸಿಕ್ಕಿತು. ಆದರೆ ಕೆಲಸ ಸಿಕ್ಕ ನಂತರ, ತನ್ನನ್ನು ಕಷ್ಟಪಟ್ಟು ಓದಿಸಿದ ಗಂಡನನ್ನೇ ಬಿಟ್ಟು ಬೇರೆ ಪುರುಷನ ಜೊತೆ ಜ್ಯೋತಿ ಮೌರ್ಯ ಹೋದಳು. ಈ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.
ರಾಜಸ್ತಾನದಲ್ಲಿ ಈ ಘಟನೆ ವರದಿಯಾಗಿದ್ದು, ತನ್ನ ಸಹಾಯದಿಂದ ಓದಿ ಉದ್ಯೋಗ ಗಿಟ್ಟಿಸಿದ್ದ ಪತ್ನಿ ಉದ್ಯೋಗ ದೊರೆತ ಬಳಿಕ ಪತಿಯನ್ನೇ ತೊರೆದಿದ್ದಳು. ಈ ಬಾರಿ ಪತಿ ಸುಮ್ಮನೇ ಕೂರದೇ ತನ್ನ ಪತ್ನಿ ಮಾಡಿದ್ದ ಎಡವಟ್ಟನ್ನು ಜಗಜ್ಜಾಹಿರು ಮಾಡಿ ಆಕೆಯ ಉದ್ಯೋಗಕ್ಕೇ ಸಂಚಕಾರ ತಂದಿದ್ದಾನೆ.
ಇಷ್ಟಕ್ಕೂ ಏನಿದು ಘಟನೆ?
ರಾಜಸ್ಥಾನದ ಕೋಟಾದ ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ. ಹೀಗಾಗಿ ಆಕೆಯನ್ನು ಮನೀಶ್ ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಹೆಂಡತಿಯನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಆತ ಮಾತ್ರ ತನ್ನ ಪತ್ನಿಯನ್ನು ಓದಿಸಬೇಕು ಎಂಬ ಸಂಕಲ್ಪದಿಂದ ಹಿಂದೆ ಸರಿಯಲೇ ಇಲ್ಲ.
ತನ್ನ ಮನೆ-ಭೂಮಿ ಎಲ್ಲವನ್ನೂ ಅಡವಿಟ್ಟು ಪತ್ನಿ ಸಪ್ನಾಳನ್ನು ಓದಿಸಿದನು. ಪತ್ನಿ ಓದು ಮುಕ್ತಾಯವಾಗಿ ಆಕೆ ಒಳ್ಳೆಯ ಕೆಲಸ ಸಿಕ್ಕರೆ ಆಗ ಸಾಲವನ್ನೆಲ್ಲಾ ತೀರಿಸಬಹುದು ಎಂದು ಆಸೆಯಲ್ಲಿದ್ದ. ಆಕೆಯ ಶಿಕ್ಷಣಕ್ಕಾಗಿ ಅವನು ಸುಮಾರು 15 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದ. ಉನ್ನತ ವ್ಯಾಸಂಗ ಮುಗಿಸಿದ ನಂತರ, ಸಪ್ನಾ ಮೀನಾ 2023 ರಲ್ಲಿ ರೈಲ್ವೆ ಉದ್ಯೋಗ ಅಧಿಸೂಚನೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದರು.
ಕೆಲಸ ಸಿಕ್ಕ ಬಳಿಕ ಪತಿಯನ್ನೇ ತೊರೆದ ಪತ್ನಿ
ಇನ್ನು ಈ ರೈಲ್ವೇ ಪರೀಕ್ಷೆಯಲ್ಲಿ ಪತ್ನಿ ಸಪ್ನಾ ಉತ್ತೀರ್ಣಳಾದಳು. ಆಕೆಗೆ ರೈಲ್ವೇ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೂಡ ದೊರೆಯಿತು. ಆದರೆ ನಿಜವಾದ ತಿರುವು ನಡೆದಿದ್ದು ಇಲ್ಲೇ. ಕೆಲಸ ಸಿಕ್ಕಾಗಿನಿಂದ ಸಪ್ನಾಳ ಕನಸಿನ ಮಾದರಿಯೇ ಬದಲಾಗಿ ಹೋಗಿತ್ತು. ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನನ್ನು ಕೀಳಾಗಿ ನೋಡಲು ಆರಂಭಿಸಿದಳು. ಕೊನೆಗೊಂದು ದಿನ ಜಗಳ ಮಾಡಿಕೊಂಡು ಗಂಡನನ್ನೇ ತೊರೆದಳು.
ಪತ್ನಿಗೆ ಶಾಕ್ ಕೊಟ್ಟ ಪತಿ
ಇನ್ನು ತನ್ನ ಪತ್ನಿ ನಡೆಯಿಂದ ಆಕ್ರೋಶಗೊಂಡಿದ್ದ ಗಂಡ ಮನೀಶ್ ತನ್ನ ಹೆಂಡತಿ ಸಪ್ನಾಗೆ ತಿಳಿಹೇಳಬಯಸಿದ್ದ,, ಆದರೆ ಆತನ ಯಾವುದೇ ಸಂಧಾನಕ್ಕೂ ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು. ಇದರಿಂದ ಕ್ರೋಧಿತನಾದ ಗಂಡ ಮನೀಶ್ ರೈಲ್ವೇ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸವನ್ನು ಪಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದ.
ಅಲ್ಲದೆ ಈ ಸಂಬಂಧ ಅಧಿಕಾರಿಗಳಿಗೆ ಪುರಾವೆಗಳನ್ನು ಸಹ ತೋರಿಸಿದ್ದ. ತನ್ನ ಪತ್ನಿ ಸಪ್ನಾ ಪ್ರಾಕ್ಸಿ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಾಬೀತು ಪಡಿಸಿದ. ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಆಕೆ ಮಾತ್ರವಲ್ಲದೇ ಅಂದು ಪರೀಕ್ಷೆ ಬರೆದ ಅಷ್ಟೂ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ ತಿಳಿಸಿದ್ದಾರೆ.
ಕೆಲಸ ಸಿಕ್ಕ ಬಳಿಕ ಗಂಡನ ತೊರೆದ ಸಪ್ನಾಳ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement