ಉತ್ತರ ಪ್ರದೇಶ: ಪರೀಕ್ಷೆ ವೇಳೆ 'ಸ್ಯಾನಿಟರಿ ಪ್ಯಾಡ್' ಕೇಳಿದ ವಿದ್ಯಾರ್ಥಿನಿ; ತರಗತಿ ಕೊಠಡಿಯಿಂದ ಹೊರಗೆ ಕಳುಹಿಸಿದ ಪ್ರಾಂಶುಪಾಲ!

ಋತುಚಕ್ರ ಆರಂಭವಾದ ವಿದ್ಯಾರ್ಥಿನಿ ಪ್ರಾಂಶುಪಾಲರ ನೆರವು ಕೋರಿದ್ದಾಗ ಸಹಾಯದ ಬದಲಿಗೆ, ಆಕೆಯನ್ನು ನಿರ್ಲಕ್ಷಿಸಲಾಗಿದ್ದು, ಅನುಚಿತವಾಗಿ ವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Casual Images
ಸಾಂದರ್ಭಿಕ ಚಿತ್ರ
Updated on

ರಾಯ್ ಬರೇಲಿ: ಪರೀಕ್ಷೆ ವೇಳೆಯಲ್ಲಿ ಸ್ಯಾನಿಟರಿ ಪ್ಯಾಡ್ ಕೇಳಿದ 11ನೇ ತರಗತಿಯ ವಿದ್ಯಾರ್ಥಿನಿಯನ್ನು ಸುಮಾರು ಒಂದು ಗಂಟೆಗಳ ಕಾಲ ತರಗತಿ ಕೊಠಡಿಯಿಂದ ಹೊರಗಡೆ ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.

ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ಈ ಘಟನೆ ನಡೆದಿದೆ. ಋತುಚಕ್ರ ಆರಂಭವಾದ ವಿದ್ಯಾರ್ಥಿನಿ ಪ್ರಾಂಶುಪಾಲರ ನೆರವು ಕೋರಿದ್ದಾಗ ಸಹಾಯದ ಬದಲಿಗೆ, ಆಕೆಯನ್ನು ನಿರ್ಲಕ್ಷಿಸಲಾಗಿದ್ದು, ಅನುಚಿತವಾಗಿ ವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಋತುಚಕ್ರ ಆರಂಭದ ಅವಧಿ ಗೊತ್ತಿದ್ದರೂ ಪರೀಕ್ಷೆಗೆ ಹಾಜರಾಗಲು ತನ್ನ ಮಗಳು ಶಾಲೆಗೆ ಹೋಗಿದ್ದಳು. ಪ್ರಾಂಶುಪಾಲರಿಂದ ಸ್ಯಾನಿಟರಿ ಪ್ಯಾಡ್‌ ಕೇಳಿದ ನಂತರ ಆಕೆಯನ್ನು ತರಗತಿಯಿಂದ ಹೊರಹೋಗುವಂತೆ ಸೂಚಿಸಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಹೊರಗೆ ನಿಲ್ಲಿಸಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ (ಡಿಐಒಎಸ್), ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಲಿಖಿತ ದೂರುಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ದೊರೆತ ಮಾಹಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ ದೇವಕಿ ನಂದನ್ ಖಚಿತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com