ಅಮಿತ್ ಶಾ ಸಂಗಮದಲ್ಲಿ ಮಿಂದೆದ್ದ ಮಾತ್ರಕ್ಕೆ ಬಡತನ ನಿರ್ಮೂಲನೆ ಆಗುತ್ತಾ?: ಮಲ್ಲಿಕಾರ್ಜುನ ಖರ್ಗೆ
ಮಹು (ಮಧ್ಯ ಪ್ರದೇಶ): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸೋಮವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಗಮದಲ್ಲಿ ಸಾಧುಗಳ ಜೊತೆಗೆ ಪವಿತ್ರ ಸ್ನಾನ ಮಾಡಿದ್ದಾರೆ.
ಇದರ ಬೆನ್ನಲ್ಲೇ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾ ಗಂಗಾ ಸ್ನಾನ ಮೂಲಕ ಬಡತನ ತೊಡೆದುಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದು, ಬಿಜೆಪಿ ನಾಯಕರು ಕ್ಯಾಮರಾಗಳಲ್ಲಿ ಕಾಣಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಮಹುವಿನಲ್ಲಿ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ನಾಯಕರು ಕ್ಯಾಮೆರಾದಲ್ಲಿ ಚೆನ್ನಾಗಿ ಕಾಣುವವರೆಗೂ ಸ್ನಾನ ಮಾಡಿದ್ದಾರೆ ಎಂದು ಹೇಳಿದರು. ಆದಾಗ್ಯೂ, ನಾನು ಯಾರ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ. ಒಂದು ವೇಳೆ ನನ್ನ ಹೇಳಿಕೆಯಿಂದ ತಪ್ಪಾಗಿದರೆ ಕ್ಷಮೆಯಾಚಿಸುವುದಾಗಿ ಹೇಳಿದರು.
ನರೇಂದ್ರ ಮೋದಿ ಅವರ ಸುಳ್ಳು ಭರವಸೆಗಳ ಬಲೆಗೆ ಬೀಳಬೇಡಿ. ಗಂಗಾ ಸ್ನಾನದಿಂದ ಬಡತನ ಕೊನೆಯಾಗುತ್ತದೆಯೇ? ಅದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆಯೇ? ಎಂದು ಪ್ರಶ್ನಿಸಿದ ಖರ್ಗೆ, ನಾನು ಯಾರ ನಂಬಿಕೆಯನ್ನು ಪ್ರಶ್ನಿಸಲು ಬಯಸುವುದಿಲ್ಲ. ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾದರೆ ಕ್ಷಮೆಯಾಚಿಸುತ್ತೇನೆ. "ಆದರೆ ಹೇಳಿ, ಒಂದು ಮಗು ಶಾಲೆಗೆ ಹೋಗದೆ, ಹಸಿವಿನಿಂದ ಸಾಯುತ್ತಿರುವಾಗ, ಕೂಲಿ ಕಾರ್ಮಿಕರಿಗೆ ಬಾಕಿ ಸಿಗದ ಸಮಯದಲ್ಲಿ ಬಿಜೆಪಿಯವರು ಸಾವಿರಾರು ರೂ. ಖರ್ಚು ಮಾಡಿ ಗಂಗಾದಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ. ಕ್ಯಾಮರಾದಲ್ಲಿ ಚೆನ್ನಾಗಿ ಕಾಣಿಸುವವರೆಗೂ ಅವರು ಸ್ನಾನ ಮಾಡುತ್ತಲೇ ಇರುತ್ತಾರೆ ಎಂದು ಲೇವಡಿ ಮಾಡಿದರು.
ಇಂತಹ ಜನರಿಂದ ದೇಶಕ್ಕೆ ಪ್ರಯೋಜನವಿಲ್ಲ. ದೇವರ ಮೇಲೆ ನಮ್ಮ ನಂಬಿಕೆ ಇದೆ. ಜನರು ಪ್ರತಿದಿನ ಮನೆಯಲ್ಲಿ 'ಪೂಜೆ' ಮಾಡುತ್ತಾರೆ. ಎಲ್ಲಾ ಮಹಿಳೆಯರು 'ಪೂಜೆ' ಮಾಡಿದ ನಂತರ ತಮ್ಮ ಮನೆಯಿಂದ ಹೊರಹೋಗುತ್ತಾರೆ. ಯಾವುದೇ ಸಮಸ್ಯೆ ಇಲ್ಲ. ಆದರೆ ಧರ್ಮದ ಹೆಸರಿನಲ್ಲಿ ಬಡವರು ಶೋಷಣೆಗೆ ಒಳಗಾಗುತ್ತಿರುವುದು ಸಮಸ್ಯೆಯಾಗಿದೆ ಎಂದು ಖರ್ಗೆ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ