
ನವದೆಹಲಿ: ಸನಾತನ ಧರ್ಮ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನಿಂದ ಸೋಮವಾರ ಬಿಗ್ ರಿಲೀಫ್ ಸಿಕ್ಕಿದೆ.
ಸನಾತನ ಧರ್ಮ ನಿರ್ಮೂಲನೆ ಅಗತ್ಯ ಎಂಬ ಹೇಳಿಕೆ ನೀಡಿದ್ದ ಸ್ಟಾಲಿನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ ಗೆ ಮೂರು ರಿಟ್ ಅರ್ಜಿಗಳ ಸಲ್ಲಿಕೆಯಾಗಿತ್ತು. ಈ ಅರ್ಜಿಗಳ ವಿಚಾರಣೆಗೆ ಸುಪ್ರೀಂ ನಿರಾಕರಿಸಿತು.
ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸಂವಿಧಾನದ 32 ನೇ ವಿಧಿಯಡಿ ರಿಟ್ ಅರ್ಜಿಯನ್ನು ಹೇಗೆ ಪುರಸ್ಕರಿಸಲು ಸಾಧ್ಯ ಎಂದು ಪ್ರಶ್ನಿಸಿತು.
ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದು, ಕಾನೂನಿನ ಅಡಿಯಲ್ಲಿ ಪರ್ಯಾಯ ಪರಿಹಾರ ಪಡೆಯಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 2023ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ. ಅದನ್ನು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ನಿರ್ಮೂನೆ ಮಾಡಿದ ಹಾಗೆ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
Advertisement