
ಚಂಡೀಗಢ: ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್'ಗೆ ಮತ್ತೆ 30 ದಿನಗಳ ಪೆರೋಲ್ ನೀಡಲಾಗಿದೆ.
ಈ ಮೂಲಕ ಗುರ್ಮಿತ್ ಅವರಿಗೆ 11ನೇ ಬಾರಿ ಪೆರೋಲ್ ನೀಡಲಾಗಿದೆ. ಇಂದು ಮುಂಜಾನೆ 5:30ರ ಸುಮಾರಿಗೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಿಡುಗಡೆಯಾಗಿದ್ದು, ಅವರನ್ನು ಬರಮಾಡಿಕೊಳ್ಳಲು ಅವರ ಆಪ್ತ ಸಹಾಯಕಿ ಹನಿಪ್ರೀತ್ ಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.
ಜೈಲಿನಿಂದ ಗುರ್ಮಿತ್ ನೇರವಾಗಿ ಸಿರ್ಸಾದಲ್ಲಿರುವ ಡೇರಾಗೆ ತೆರಳಿದ್ದು, ಇಲ್ಲಿ ಹತ್ತು ದಿನಗಳ ಕಾಲ ಕಳೆದು, ಇಪ್ಪತ್ತು ದಿನಗಳನ್ನು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಬರ್ನಾವಾ ಆಶ್ರಮದಲ್ಲಿ ಕಳೆಯಲಿದ್ದಾರೆಂದು ವರದಿಗಳು ತಿಳಿಸಿವೆ.
ತಮ್ಮ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಿರ್ಸಾ ಮೂಲದ ರಾಮ್ ರಹೀಮ್ ಸಿಂಗ್ ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲು ವಾಸ ಅನುಭವಿಸುತ್ತಿದ್ದಾರೆ.
ಇದಲ್ಲದೆ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇದರ ಶಿಕ್ಷೆ ಪ್ರಸ್ತುತ ಶಿಕ್ಷೆಯ ಅವಧಿ ಮುಗಿದ ನಂತರ ಪ್ರಾರಂಭವಾಗಲಿದೆ.
ಫೆಬ್ರುವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಹೊರಬೀಳಲಿದೆ. ಈ ವೇಳೆ ಗುರ್ಮೀತ್‌ಗೆ ಪೆರೋಲ್ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಿರ್ಸಾ ಡೇರಾ ಸಚ್ಚಾ ಸೌದಾ ಪಂಥವು ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಹರಿಯಾಣದ ಸಿರ್ಸಾ, ಫತೇಹಾಬಾದ್, ಕುರುಕ್ಷೇತ್ರ, ಕೈತಾಲ್ ಮತ್ತು ಹಿಸಾರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೇರಾ ಸೌದಾ ಪಂಥವು ಸಾಕಷ್ಟು ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ.
Advertisement