ಸೈಫ್ ಅಲಿ ಖಾನ್ ದಾಳಿ ಪ್ರಕರಣ: ಬಂಧಿತ ಬಾಂಗ್ಲಾದೇಶಿ ವಿರುದ್ಧ ಬಲವಾದ ಸಾಕ್ಷ್ಯಗಳಿವೆ- ಮುಂಬೈ ಪೊಲೀಸ್
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಾಂಗ್ಲಾದೇಶಿ ಪ್ರಜೆಯ ವಿರುದ್ಧ ತಮ್ಮ ಬಳಿ ಸಾಕಷ್ಟು ಮತ್ತು ಬಲವಾದ ಪುರಾವೆಗಳಿವೆ ಎಂದು ಮಂಗಳವಾರ ಹೇಳಿದ್ದಾರೆ.
ಜನವರಿ 16 ರಂದು ಬೆಳಗಿನ ಜಾವ ಮುಂಬೈನ ಬಾಂದ್ರಾ ನಿವಾಸದಲ್ಲಿ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಲಾಯಿತು ಮತ್ತು ಅವರಿಗೆ ಚಾಕುವಿನಿಂದ ಆರು ಬಾರಿ ಇರಿಯಲಾಗಿತ್ತು.
ಜನವರಿ 19 ರಂದು, ಈ ಸಂಬಂಧ ನೆರೆಯ ಥಾಣೆಯಲ್ಲಿ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಅಲಿಯಾಸ್ ವಿಜಯ್ ದಾಸ್ ನನ್ನು ಪೊಲೀಸರು ಬಂಧಿಸಿದ್ದರು.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ ಪ್ರದೇಶ) ಪರಮಜಿತ್ ದಹಿಯಾ ಅವರು, ತನಿಖೆಯಲ್ಲಿನ ಬೆಳವಣಿಗೆಯನ್ನು ಹಂಚಿಕೊಂಡರು ಮತ್ತು ಇದು ಡಿಸಿಪಿ ವಲಯ 9 ತಂಡ ಮತ್ತು ಅಪರಾಧ ವಿಭಾಗದ ಜೊತೆಯಲ್ಲಿ ಮಾಡಿದ "ಅತ್ಯುತ್ತಮ, ಪುರಾವೆ ಆಧಾರಿತ ತನಿಖೆ" ಎಂದು ಹೇಳಿದರು.
"ಮುಂಬಯಿ ಪೊಲೀಸರು ಆರೋಪಿಯ ವಿರುದ್ಧ ಸಾಕ್ಷ್ಯಚಿತ್ರ, ದೈಹಿಕ ಮತ್ತು ತಾಂತ್ರಿಕ ಸೇರಿದಂತೆ ಸಾಕಷ್ಟು ಬಲವಾದ ಪುರಾವೆಗಳನ್ನು ಹೊಂದಿದ್ದಾರೆ" ಎಂದು ಅವರು ಹೇಳಿದರು.
"ಆರೋಪಿಯ ಗುರುತನ್ನು ಖಚಿತಪಡಿಸಿಕೊಳ್ಳಲು ಆರೋಪಪಟ್ಟಿ ಸಲ್ಲಿಸುವ ಮೊದಲು ಸಾಕ್ಷ್ಯ ಸಂಗ್ರಹದ ಭಾಗವಾಗಿ, ಪೊಲೀಸರಿಗೆ ಮುಖ ಗುರುತಿಸುವಿಕೆಯ ಆಯ್ಕೆ ಇದೆ ಮತ್ತು ನಾವು ಅದನ್ನು ಅನ್ವೇಷಿಸುತ್ತೇವೆ" ಎಂದು ಅವರು ಹೇಳಿದರು.
"ಪ್ರಕರಣದ ತನಿಖೆಯ ಸಮಯದಲ್ಲಿ, ಪೊಲೀಸರಿಗೆ ಬಂಧಿತ ಆರೋಪಿಯೊಂದಿಗೆ ಇತರೆ ಯಾವುದೇ ಸಹಚರರು ಕಂಡುಬಂದಿಲ್ಲ" ಎಂದು ದಹಿಯಾ ತಿಳಿಸಿದರು.
ಬಂಧಿತ ಆರೋಪಿಯ ಸಂಪರ್ಕದಲ್ಲಿದ್ದ ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
"ನಾವು ಬೆರಳಚ್ಚುಗಳ ಮಾದರಿಗಳನ್ನು ಅಪರಾಧ ತನಿಖಾ ಇಲಾಖೆಗೆ(ಸಿಐಡಿ) ಕಳುಹಿಸಿದ್ದೇವೆ. ಇನ್ನು, ಆತನ ಬೆರಳಚ್ಚುಗಳ ಬಗ್ಗೆ ನಮಗೆ ಯಾವುದೇ ಅಧಿಕೃತ ವರದಿ ಬಂದಿಲ್ಲ" ಎಂದು ಅವರು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ