HDKumaraswamy visit BSL
ಬೊಕಾರೋ ಉಕ್ಕು ಸ್ಥಾವರದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ

ಬೊಕಾರೋ ಉಕ್ಕು ಸ್ಥಾವರಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿ; ಕಾರ್ಯಾಚರಣೆಗಳ ಸಮಗ್ರ ಅವಲೋಕನ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಿಯೇ ತೀರುತ್ತೇವೆ.
Published on

ಬೊಕಾರೋ (ಜಾರ್ಖಂಡ್): ಭಾರತದಲ್ಲಿಯೇ ಅತಿದೊಡ್ಡ ಉಕ್ಕು ಉತ್ಪಾದನಾ ಕಾರ್ಖಾನೆಗಳಲ್ಲಿ ಒಂದಾಗಿರುವ ಜಾರ್ಖಂಡ್ ರಾಜ್ಯದ ಬೊಕಾರೋ ಉಕ್ಕು ಸ್ಥಾವರಕ್ಕೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿದ್ದು, ಅಲ್ಲಿರುವ ಪ್ರಮುಖ ಸೌಲಭ್ಯಗಳು, ಯೋಜನೆಗಳನ್ನು ಪರಿಶೀಲಿಸಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಿಯೇ ತೀರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ನಿಗದಿ ಮಾಡಿರುವ ಗುರಿ ದೊಡ್ಡದಿದೆ. ಆದರೆ, ಅದನ್ನು ಮುಟ್ಟುತ್ತೇವೆ ಎನ್ನುವ ಅಚಲ ವಿಶ್ವಾಸವಿದೆ. ಬೊಕಾರೋ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ ಮೇಲೆ ಆ ವಿಶ್ವಾಸ ಇಮ್ಮಡಿಯಾಗಿದೆ ಎಂದು ಹೇಳಿದರು.

ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಸಂಪೂರ್ಣ ಶೂನ್ಯಕ್ಕೆ ಇಳಿಸುವುದು ಕೇಂದ್ರ ಸರಕಾರದ ಗುರಿ. 2070ರ ವೇಳೆಗೆ ಇಂಗಾಲದ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುತ್ತೇವೆ ಎಂದು ಅವರು ಪಣ ತೊಟ್ಟರು.

ಉಕ್ಕು ಖಾತೆಯ ಸಹಾಯಕ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮೇರೆಂದು ಪ್ರಕಾಶ್ ಮುಂತಾದ ಉನ್ನತ ಅಧಿಕಾರಿಗಳ ಜತೆ ಬೊಕಾರೋ ಕಾರ್ಖಾನೆಯನ್ನು ವೀಕ್ಷಿಸಿದ ಸಚಿವರು; ಭಾರತದ ಉಕ್ಕು ಬೇಡಿಕೆಯನ್ನು ಪೂರೈಸುವಲ್ಲಿ ಈ ಸ್ಥಾವರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಥಾವರಕ್ಕೆ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದು ಹೇಳಿದರು.

ಉಕ್ಕು ಉದ್ಯಮ ಭಾರತದ ಸುಸ್ಥಿರ ಅಭಿವೃದ್ಧಿಯ ಬೆನ್ನೆಲುಬು. ಹೀಗಾಗಿ ಆತ್ಮನಿರ್ಭರ್ ಭಾರತದ ಪರಿಕಲ್ಪನೆಯ ಅಡಿಯಲ್ಲಿ ಕೇಂದ್ರ ಸರಕಾರ ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಬೊಕಾರೊ ಉಕ್ಕು ಸ್ಥಾವರ ಉತ್ಕೃಷ್ಟತೆ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಶ್ರೇಷ್ಠತೆಗೆ ಉಜ್ವಲ ಉದಾಹರಣೆಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತಂತೆ ಉಕ್ಕು ಕ್ಷೇತ್ರದಲ್ಲಿ ನಿರಂತರ ಸುಸ್ಥಿರತೆ, ನಾವೀನ್ಯತೆ ಮತ್ತು ನಮ್ಮ ಕಾರ್ಮಿಕರ ಕಲ್ಯಾಣಕ್ಕೆ ಆದ್ಯತೆ ನೀಡುವುದರೊಂದಿಗೆ ನಾವು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವಾಗಿ ಪರಿವರ್ತಿಸುತ್ತಿದ್ದೇವೆ ಎಂದು ಹೇಳಿದರು.

HDKumaraswamy visit BSL
KIOCL, HMT ಬಗ್ಗೆ ರಾಜ್ಯ ಸರ್ಕಾರದಿಂದ ಅಪ ಪ್ರಚಾರ: ಹೆಚ್.ಡಿ ಕುಮಾರಸ್ವಾಮಿ ಕಿಡಿ

ರಕ್ಷಣಾ ಮತ್ತು ಹಸಿರು ಉಕ್ಕಿನ ಮೇಲೆ ಕೇಂದ್ರೀಕರಿಸಿ: ಬೊಕಾರೊ ಉಕ್ಕು ಕಾರ್ಖಾನೆಯ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರಿಗೆ 3D ನಕ್ಷೆಯನ್ನು ತೋರಿಸಲಾಯಿತು. ಅಲ್ಲಿಂದಲೇ ಸ್ಥಾವರದ ಕಾರ್ಯಾಚರಣೆಗಳ ಸಮಗ್ರ ಅವಲೋಕನವನ್ನು ಮಾಡಿದ ಸಚಿವರು; ನಂತರ ಪ್ರತಿ ವಿಭಾಗಕ್ಕೂ ಭೇಟಿ ಕೊಟ್ಟರು. ಮುಖ್ಯವಾಗಿ ಊದು ಕುಲುಮೆ (ಬ್ಲಾಸ್ಟ್ ಫರ್ ನೆಸ್) ಗಳನ್ನು ಸಚಿವರು ವೀಕ್ಷಿಸಿದರು.

ಬೊಕಾರೋ ಉಕ್ಕು ಕಾರ್ಖಾನೆಯಿಂದ ಭಾರತೀಯ ನೌಕಾಪಡೆ ಮತ್ತು ಇತರೆ ರಕ್ಷಣಾ ವಲಯಗಳಿಗೆ ಭಾರೀ ಪ್ರಮಾಣದಲ್ಲಿ ಅತ್ಯುತ್ತಮ ಗುಣಮಟ್ಟದ ಡಿಎಂಆರ್ ಪ್ಲೇಟ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ ಪೋಷಿಸುವ ಡಿಎಂಆರ್ ಪ್ಲೇಟ್‌ಗಳ ತಯಾರಿಕೆ ಪ್ರಕ್ರಿಯೆಯನ್ನು ಸಚಿವರು ಖುದ್ದು ವೀಕ್ಷಿಸಿದರು. ಅಲ್ಲದೆ; ರಾಷ್ಟ್ರ ಭದ್ರತೆಗೆ ಕಾರ್ಖಾನೆ ನೀಡುತ್ತಿರುವ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು.

ಹೆಚ್ಚಿನ ಉತ್ಪಾದನೆಗಾಗಿ ವಿಸ್ತರಣಾ ಯೋಜನೆಗಳು: ಇದೇ ವೇಳೆ ಕೇಂದ್ರ ಸಚಿವರು ಸ್ಥಾವರದ ಮಹತ್ವಾಕಾಂಕ್ಷೆಯ ಕೆಲವಾರು ವಿಸ್ತರಣಾ ಯೋಜನೆಗಳನ್ನು ಪರಿಶೀಲಿಸಿದರು. ಮುಖ್ಯವಾಗಿ ವಾರ್ಷಿಕ 3.2 ದಶಲಕ್ಷ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯದ ಊದುಕುಲುಮೆಯ ಸ್ಥಾಪನೆ, ಹೊಸ ಸ್ಟಾಂಪ್ ಚಾರ್ಜ್ ಬ್ಯಾಟರಿಗಳು ಅಳವಡಿಕೆ, ಆಧುನಿಕ ಶೀತಲೀಕರಣ ಘಟಕ ಸ್ಥಾಪನೆ ಇತ್ಯಾದಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಎಲ್ಲಾ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com