HD Kumaraswamy
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

KIOCL, HMT ಬಗ್ಗೆ ರಾಜ್ಯ ಸರ್ಕಾರದಿಂದ ಅಪ ಪ್ರಚಾರ: ಹೆಚ್.ಡಿ ಕುಮಾರಸ್ವಾಮಿ ಕಿಡಿ

ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸುವ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ.
Published on

ಬೆಂಗಳೂರು: ಹೆಚ್ ಎಂಟಿ ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಸಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ದಾಖಲೆಗಳ ಸಮೇತ ರಾಜ್ಯ ಸರಕಾರದ ಜತೆ ಚರ್ಚೆಗೆ ತಯಾರಿದ್ದೇನೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಐಒಸಿಎಲ್ ಬಗ್ಗೆ ರಾಜ್ಯ ಸರಕಾರ ರಾಜಕಾರಣ ಮಾಡಬಾರದು. ಸಮಸ್ಯೆ ಇದ್ದರೆ ಕೂತು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸುವ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ. ಒಂದು ಸಭೆ ಮಾಡಲಿ. ಅಲ್ಲಿ ದಾಖಲೆಗಳ ಸಮೇತ ನಾನು ಮಾತನಾಡುತ್ತೇನೆ. ಒಂದು ವೇಳೆ ಕೆಐಒಸಿಎಲ್ ತಪ್ಪುಗಳಿದ್ದರೆ ಅದಕ್ಕೆ ಆ ಇಲಾಖೆಯ ಸಚಿವನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಅದರ ಹೊರತಾಗಿ ರಾಜ್ಯದ ಹಿತಾಸಕ್ತಿಯ ಬಗ್ಗೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಅರಣ್ಯ ಸಚಿವರಿಂದ ಕ್ಷುಲ್ಲಕ ರಾಜಕಾರಣ: ಅರಣ್ಯ ಸಚಿವರು ಈ ಎರಡೂ ಸಂಸ್ಥೆಗಳ ಬಗ್ಗೆ ಸತ್ಯಕ್ಕೆ ದೂರವಾದ ವಿಷಯಗಳನ್ನು ದಿನನಿತ್ಯವೂ ಮಾಧ್ಯಮಗಳಿಗೆ ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಸಚಿವರು ದಾಖಲೆಗಳನ್ನು ಓದಿ ಅರಿತುಕೊಳ್ಳಬೇಕು. ಆ ನಂತರ ಅವರು ಮಾತನಾಡಿದರೆ ಚೆನ್ನಾಗಿರುತ್ತದೆ. ಅದರ ಹೊರತಾಗಿ ರಾಜ್ಯ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಿದರೆ ಅವರನ್ನು ಸಚಿವರು ಎಂದು ಕರೆಯಲಾಗುತ್ತದೆಯೇ ಎಂದು ಅವರು ಕಿಡಿಕಾರಿದರು.

HD Kumaraswamy
ಭೂಮಿ ಹಿಂದಿರುಗಿಸಿ; 1,349 ಕೋಟಿ ರೂ ಬಾಕಿ ಪಾವತಿಸಿ: KIOCLಗೆ ಅರಣ್ಯ ಇಲಾಖೆ ಸೂಚನೆ

ರಾಜ್ಯ ಸರಕಾರದ ತಪ್ಪಿನಿಂದ 300-400 KIOCL ಕಾರ್ಮಿಕರು ಬೀದಿಗೆ: ರಾಜ್ಯ ಸರ್ಕಾರದ ಹಠಮಾರಿತನದಿಂದ ಕುದುರೆಮುಖ ಸಂಸ್ಥೆಯ ಸುಮಾರು 300-400 ಕಾರ್ಮಿಕರು ಬೀದಿಯಲ್ಲಿ ನಿಂತಿದ್ದಾರೆ. ಒಂದು ಕಡೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ರಾಜ್ಯ ಸರಕಾರ ಮತ್ತೊಂದೆಡೆ ಅಸಹಕಾರ ನೀಡುತ್ತಿದೆ. ಪ್ರತಿಯೊಂದಕ್ಕೂ ಕೇಂದ್ರ ಸರಕಾರವನ್ನು ನಿಂದಿಸಿದರೆ ಉಪಯೋಗವಿಲ್ಲ. ಸಮಸ್ಯೆ ಬಗ್ಗೆ ಸಿಎಂ ಸಭೆ ಕರೆಯಲಿ. ಏನು ಸಮಸ್ಯೆ ಇದೆ ಅಂತಾ ಚರ್ಚೆ ಮಾಡೋಣ. ಸಮಸ್ಯೆ ಇದ್ದರೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

RNIL ಉದಾಹರಣೆ ಕೊಟ್ಟ ಕೇಂದ್ರ ಸಚಿವರು: ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RNIL) ಸಂಕಷ್ಟದಲ್ಲಿ ಇತ್ತು. ನಿರ್ವಹಣಾ ಬಂಡವಾಳ ಇಲ್ಲದೆ ಸೊರಗಿತ್ತು. ಏಕಾಏಕಿ 4500 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ, ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯ ಮೇರೆಗೆ ಕೇವಲ ನಲವತ್ತೆಂಟು ಗಂಟೆಗಳ ಒಳಗಾಗಿ ಅಷ್ಟೂ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಲಾಯಿತು. ನೆರೆ ರಾಜ್ಯದಲ್ಲಿ ನಮಗೆ ಇಂತಹ ಉತ್ತಮ ಸಹಕಾರ ಸಿಗುತ್ತಿದೆ. ಆದರೆ, ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಸಹಕಾರ ಸಿಗುತ್ತಿಲ್ಲ. ಒಬ್ಬ ಕೇಂದ್ರ ಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯೇ ಇದು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

HD Kumaraswamy
ಕಳ್ಳಬೇಟೆ ಕಡಿಮೆಯಾಗಿದೆ, ಆದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ: ಸಚಿವ ಈಶ್ವರ್ ಖಂಡ್ರೆ (ಸಂದರ್ಶನ)

ಯಾರೂ ಬಂದು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಿಲ್ಲ: ಹಾದಿಬೀದಿಯಲ್ಲಿ ಹೇಳಿಕೆ ನೀಡುತ್ತಾ ಹೋದರೆ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು. ಇಲ್ಲಿ ರಾಜಕಾರಣ ಮುಖ್ಯವಲ್ಲ. ಅದೇನಿದ್ದರೂ ಚುನಾವಣೆಗೆ ಸೀಮಿತ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಯಾಕೆ ಬೇಕು? ಇಲ್ಲಿಯವರೆಗೂ ಒಬ್ಬರೂ ನನ್ನ ಬಳಿ ಬಂದು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ. ಎಂ.ಬಿ.ಪಾಟೀಲ್ ಒಬ್ಬರು ದೆಹಲಿಯ ನನ್ನ ಸಚಿವಾಲಯಕ್ಕೆ ಬಂದು ಕೈಗಾರಿಕೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದು ಬಿಟ್ಟರೆ ಯಾರೊಬ್ಬರೂ ನನ್ನೊಂದಿಗೆ ರಾಜ್ಯದ ಬಗ್ಗೆ ಚರ್ಚೆ ಮಾಡಿಲ್ಲ. ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ಎಂದು ಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದಾರೆ. ಹೀಗೆ ಮಾಡಿದರೆ ಮೇಕೆದಾಟುಗೆ ಅನುಮತಿ ದೊರೆಯುತ್ತದೆಯೇ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.

ಚಿಲ್ಲರೆ ರಾಜಕಾರಣ ಬಿಡಬೇಕು. ಟೊಯೊಟಾ ಸೇರಿದಂತೆ ಅನೇಕ ಕೈಗಾರಿಕೆಗಳು ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಶಾಸಕ ರಾಜುಕಾಗೆ ಅಭಿವೃದ್ಧಿ ಅನುದಾನ ಬಗ್ಗೆ ಏನು ಹೇಳಿದ್ದಾರೆ. ಅರಣ್ಯ ಸಚಿವರು ಅವರ ಬಳಿ ಇರುವ ದಾಖಲೆಗಳನ್ನು ತೆಗೆದುಕೊಂಡು ಬರಲಿ. ನಾನು ಕುಳಿತುಕೊಳ್ಳುತ್ತೇನೆ. ಅವರೂ ಬರಲಿ, ಸಭೆಯಲ್ಲಿ ಎಲ್ಲಾ ಚರ್ಚೆಯಾಗಲಿ. ಸಭೆ ಯಾಕೆ ಕರೆಯಲಾಗುತ್ತಿಲ್ಲ. ಎಲ್ಲಾ ದಾಖಲೆ ಸಮೇತ ಚರ್ಚೆ ಮಾಡೋಣ. ಈಶ್ವರ್ ಖಂಡ್ರೆ ಬೋಗಸ್ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com