ಕಳ್ಳಬೇಟೆ ಕಡಿಮೆಯಾಗಿದೆ, ಆದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ: ಸಚಿವ ಈಶ್ವರ್ ಖಂಡ್ರೆ (ಸಂದರ್ಶನ)
ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಕಳ್ಳಬೇಟೆ ಕಡಿಮೆಯಾಗಿದೆ. ಆದರೆ, ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಶರಾವತಿಯಂತಹ ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಹೋರಾಟ ಮುಂದುವರೆದಿದ್ದು, ಈ ನಡುವಲ್ಲೇ ಗಣಿಗಾರಿಕೆಗೆ ಪರಿಹಾರವಾಗಿ ಭೂಮಿ ನೀಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.
ದೊಡ್ಡ ಅತಿಕ್ರಮಣಗಳನ್ನು ಮಾತ್ರ ತೆರವುಗೊಳಿಸಲು ಕಾರಣವಿದೆಯೇ?
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಒತ್ತುವರಿ ನಡೆದಿದೆ. 2006ರಲ್ಲಿ ಅರಣ್ಯ ಹಕ್ಕು ಕಾಯಿದೆ (ಎಫ್‌ಆರ್‌ಎ) ಮತ್ತು 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿತು. ಎಫ್‌ಆರ್‌ಎ ಜಾರಿಗೊಳಿಸುವ ಮುನ್ನ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ಅವರಿಗೆ ಜಮೀನು ನೀಡಬೇಕಿತ್ತು, ಅದನ್ನು ಮಾಡಿರಲಿಲ್ಲ. 2006 ರಲ್ಲಿ, ಸರ್ಕಾರವು ಅರಣ್ಯದೊಳಗೆ ವಾಸಿಸುವವರಿಂದ ಅರ್ಜಿಗಳನ್ನು ಆಹ್ವಾನಿಸಿತು. ಈ ವೇಳೆ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅದರಲ್ಲಿ ಶೇ.5ರಷ್ಟು ಅರ್ಜಿಗಳು ಮಾತ್ರ ಅರ್ಹವಾಗಿವೆ. ಅವರನ್ನು ಇದ್ದಕ್ಕಿದ್ದಂತೆ ಸ್ಥಳಾಂತರಿಸಲು ಸಾಧ್ಯವಿಲ್ಲ.
ಅರಣ್ಯ ಮತ್ತು ಪರಿಸರ ಇಲಾಖೆಗಳು ತಮ್ಮ ಪ್ರಾಮುಖ್ಯತೆಯನ್ನು ಪಡೆಯುತ್ತವೆ ಎಂದು ನೀವು ಭಾವಿಸುತ್ತೀರಾ?
ಇಲಾಖೆಗಳನ್ನು ಈ ಹಿಂದೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಶರಾವತಿ ಪ್ರಕರಣವೇ ಇದಕ್ಕೆ ಉದಾಹರಣೆ. ಯೋಜನೆ ವೇಲೆ ಸಾವಿರಾರು ಜನರು ಸ್ಥಳಾಂತರಗೊಂಡರು. ಆಗ ಅವರಿಗೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ನಿಯಮಗಳ ಪ್ರಕಾರ, 1980 ರ ದಶಕದ ಮೊದಲು ಯಾರಾದರೂ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದರೆ ಮತ್ತು ಭೂಮಿಯನ್ನು ಡಿನೋಟಿಫೈ ಮಾಡಿದ್ದರೆ, ಅದನ್ನು ಯಾರಿಗಾದರೂ ಹಂಚಬಹುದಾಗಿದೆ. ಇದು ಕೇಂದ್ರ ಸರ್ಕಾರದ ನಿಲುವು ಮತ್ತು ಸುಪ್ರೀಂಕೋರ್ಟ್ ಆದೇಶ. ಆದರೆ, ಆಗ ಇದನ್ನು ಮಾಡಿರಲಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಂಪುಟ ನಿರ್ಣಯದ ಮೂಲಕ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಇದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಯಿತು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ಆದೇಶ ಕಾನೂನು ಪ್ರಕಾರವಿಲ್ಲ ಎಂದು ರದ್ದುಪಡಿಸಲಾಯಿತು. ಇದೀಗ ಪುನರ್ವಸತಿಗೆ ಭೂಮಿ ಮಂಜೂರು ಮಾಡಬೇಕಾದರೆ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈಗಲೂ ಈ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ಇದೊಂದೇ ಪ್ರಕರಣವೇ?
ಇಂತಹ ಶೋಷಣೆ, ಅನ್ಯಾಯ ಹಲವು ವರ್ಷಗಳಿಂದ ನಡೆಯುತ್ತಿದ್ದು, ಅದನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ತಮ್ಮ ಭೂಮಿಯನ್ನು ಮಾರಾಟ ಮಾಡಲು, ಕೃಷಿ ಸಾಲ ಪಡೆಯಲು ಅಥವಾ ಸರ್ಕಾರದ ಯೋಜನೆಗಳಿಂದ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದ ಸಾವಿರಾರು ಜನರಿದ್ದಾರೆ. ಇನ್ನೊಂದು ಪ್ರಕರಣ ಭದ್ರಾ ಯೋಜನೆ. ಕೆಲವರಿಗೆ ಪುನರ್ವಸತಿ ಕಲ್ಪಿಸಲಾಗಿದೆ, ಆದರೆ, ಅವರು ಇನ್ನೂ ತಮ್ಮ ಹಕ್ಕುಗಳನ್ನು ಪಡೆದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ಮಾತನಾಡಿ, ಬಳಸಿಕೊಳ್ಳಳಾಗುತ್ತಿದೆ. ವಾಸ್ತವವಾಗಿ ಪರಿಹರಿಸಲಾಗುತ್ತಿಲ್ಲ.
ವಿವಿಧ ಯೋಜನೆಗಳಿಂದ ಸ್ಥಳಾಂತರಗೊಂಡ ಜನರ ಕ್ರೋಢೀಕೃತ ಸಮೀಕ್ಷೆ ನಡೆಸುವಿರಾ?
ಕಂದಾಯ ಮತ್ತು ನೀರಾವರಿ ಸಚಿವರ ಜತೆ ಮಾತನಾಡಿದ್ದೇನೆ. ಕಂದಾಯ ಮತ್ತು ನೀರಾವರಿ ಇಲಾಖೆಗಳ ಸಾಮೂಹಿಕ ಜವಾಬ್ದಾರಿಯಾಗಿರುವುದರಿಂದ ಒಟ್ಟಾಗಿ ಕುಳಿತು ನೀತಿ ರೂಪಿಸಬೇಕು. ವರ್ಷಗಟ್ಟಲೆ ಅಲ್ಲಿಯೇ ಇದ್ದ ಜನರನ್ನು ಹೊರಹಾಕಲಾಗಿದೆ. ಇದು ವಾಸ್ತವ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆ ಆಗಬೇಕು. ಕೆಲವು ಪ್ರದೇಶಗಳ ಕುರಿತು ಕಂದಾಯ ಇಲಾಖೆ ಬಳಿಯೇ ಭೂ ದಾಖಲೆಗಳೇ ಇಲ್ಲದಂತಾಗಿದೆ, ಈ ಎಲ್ಲಾ ವಿಷಯಗಳನ್ನು ಟಿಪ್ಪಣಿ ಮಾಡಲು ಮತ್ತು ಜನರು ವಾಸಿಸುತ್ತಿದ್ದಾರೆ ಮತ್ತು ಇದು ಅವರ ಹಕ್ಕು ಎಂದು ಮಾನವೀಯ ಆಧಾರದ ಮೇಲೆ ಈ ಪ್ರಕರಣಗಳನ್ನು ಪರಿಗಣಿಸಲು ಸುಪ್ರೀಕೋರ್ಟ್ ಬಳಿಕ ಮನವಿ ಮಾಡಲು ಚಿಂತನೆ ನಡೆಸಲಾಗಿದೆ.
ಮೇಕೆದಾಟುದಂತಹ ಯೋಜನೆಗಳು ಬಂದಾಗ ಭವಿಷ್ಯದಲ್ಲಿ ಏನಾಗಬಹುದು?
ಯಾವುದೇ ಯೋಜನೆಗಾಗಿ ಯಾರೂ ಸ್ಥಳಾಂತರಗೊಳ್ಳುವುದಿಲ್ಲ. ಅರಣ್ಯ ಪ್ರದೇಶಗಳನ್ನು ಗುರುತಿಸಲಾಗಿದೆ. ಅರಣ್ಯ ಮಂಜೂರಾತಿ ಸಿಗುವವರೆಗೆ ಭೂಮಿ ನೀಡುವಂತಿಲ್ಲ. ರಾಜ್ಯ/ಕೇಂದ್ರ ಸರ್ಕಾರಗಳು ಅಥವಾ ಇತರರು ಸೇರಿದಂತೆ ಏಜೆನ್ಸಿಗಳು ಪರಿವೇಶ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಇದಕ್ಕೆ ನಿಯಮಗಳಿವೆ. ಅವರು ಪ್ರಸ್ತುತ ನಿವ್ವಳ ಮೌಲ್ಯದೊಂದಿಗೆ ಪರಿಹಾರ ಅರಣ್ಯೀಕರಣಕ್ಕೆ (ಸಿಎ) ಭೂಮಿಯನ್ನು ನೀಡಬೇಕು. ನಂತರ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಸಮಿತಿಯು ಪ್ರಸ್ತಾವನೆಯನ್ನು ಪರಿಶೀಲಿಸುತ್ತದೆ. ಭೂಮಿಯನ್ನು ನಿರ್ದಿಷ್ಟ ಯೋಜನೆಗಳಿಗೆ ಮಾತ್ರ ಮಂಜೂರಾತಿ ನೀಡಲಾಗುತ್ತದೆ.
ಕಾಡಿನೊಳಗೆ ವಾಸಿಸುವ ಆದಿವಾಸಿಗಳ ಬಗ್ಗೆ ಏನು ಹೇಳುತ್ತೀರಿ?
ಅರಣ್ಯ ಮೀಸಲು ಪ್ರದೇಶಗಳಲ್ಲಿ ತಂಗಿರುವ ಆದಿವಾಸಿಗಳಿಗೆ ಪುನರ್ವಸತಿಯೇ ದೊಡ್ಡ ಸಮಸ್ಯೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಶತಮಾನಗಳಿಂದ ಕಾಡಿನಲ್ಲಿ ಕಾನೂನುಬದ್ಧವಾಗಿ ಉಳಿದುಕೊಂಡಿರುವುದು ಕಂಡು ಬಂದಿದೆ. ಆದರೆ, ಅಲ್ಲಿ ವಿದ್ಯುತ್ ಅಥವಾ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಅವರ ಸ್ವಂತ ಭೂಮಿಯೇ ಆಗಿದ್ದರೂ ಏನನ್ನೂ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದು ಪರಿಶೀಲಿಸಬೇಕಾದ ಗಂಭೀರ ಸಮಸ್ಯೆಯಾಗಿದೆ. ಅವರನ್ನು ಮುಖ್ಯವಾಹಿನಿಗೆ ತರಬೇಕು. ಒಂದೋ ನಾವು ಅವರಿಗೆ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ನೀಡಬೇಕು ಅಥವಾ ಕೆಲವು ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಮೂಲಕ ಅವರನ್ನು ಸ್ಥಳಾಂತರಿಸಬೇಕು. ಒಂದು ಪ್ಯಾಕೇಜ್ ಇದೆ, ಕುಟುಂಬ ಸ್ಥಳಾಂತರಗೊಂಡರೆ 15 ಲಕ್ಷ ರೂ. ನೀಡಲಾಗುತ್ತದೆ. ಸುಮಾರು 736 ಕುಟುಂಬಗಳು ಸ್ಥಳಾಂತರಗೊಂಡಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಂತೆ ಇದನ್ನು ಮಾಡಲಾಗಿದೆ. ಇದು ಭಾರತದ ಯಶೋಗಾಥೆ. ಪುನರ್ವಸತಿ ಅಗತ್ಯವಿದೆ.
ಆದಿವಾಸಿಗಳ ಸ್ಥಳಾಂತರ ಕಾರ್ಯಕ್ರಮ ಏಕೆ ಸ್ಥಗಿತಗೊಂಡಿದೆ?
ಸ್ಥಗಿತಗೊಂಡಿಲ್ಲ. ಬಜೆಟ್ ಹಂಚಿಕೆ ತುಂಬಾ ಕಡಿಮೆಯಿದೆ. ವಾರ್ಷಿಕ ಸುಮಾರು 5-10 ಕೋಟಿ ರೂ. ಮಂಜೂರಾಗಿದೆ. ಹೆಚ್ಚಿನ ಅನುದಾನಕ್ಕಾಗಿ ಹಣಕಾಸು ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.
ರಾಜ್ಯದಲ್ಲಿ ವನ್ಯಜೀವಿ ಅಪರಾಧಗಳು ಮತ್ತು ಬೇಟೆಯ ಪ್ರಮಾಣ ಎಷ್ಟಿದೆ?
ರಾಜ್ಯದಲ್ಲಿ ಕಳ್ಳಬೇಟೆ ಪ್ರಮಾಣ ಶೇ.1 ಕ್ಕೆ ಇಳಿದಿದೆ. ನಮ್ಮಲ್ಲಿ ಸುಮಾರು 200 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಈ ಶಿಬಿರಗಳಲ್ಲಿ ಸುಮಾರು 1,000 ಜನರು ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ 6,395 ಆನೆಗಳು ಮತ್ತು 563 ಹುಲಿಗಳಿವೆ. ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ, ಆದರೆ. ಮಾನವ-ಪ್ರಾಣಿ ಸಂಘರ್ಷ ಸಂಖ್ಯೆ ಕೂಡ ಹೆಚ್ಚಾಗಿದೆ. ಅರಣ್ಯದ ಅಂಚಿನವರೆಗೂ ವಸತಿ ಪ್ರದೇಶಗಳಿದ್ದು, ಇದು ಹೆಚ್ಚುತ್ತಿದೆ. ಜನರು ಪ್ರಾಣಿಗಳೊಂದಿಗೆ ಸಹಬಾಳ್ವೆಯನ್ನು ಕಲಿಯಬೇಕು.
ರಾಜ್ಯದಲ್ಲಿ ಕಳ್ಳಬೇಟೆ ಕಡಿಮೆಯಾಗಿದೆ, ಆದರೆ ಮನುಷ್ಯ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಪರಿಸರ ಸೂಕ್ಷ್ಮ ವಲಯಗಳು ಮತ್ತು ಬಫರ್ ವಲಯಗಳು ಕಡಿಮೆಯಾಗಿವೆ. ಈ ವಿಷಯದಲ್ಲಿ ನಾವು ತುಂಬಾ ಕಟ್ಟುನಿಟ್ಟಾಗಿರಬೇಕು.
ಕಳೆ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆ ಎದುರಿಸುತ್ತಿರುವ ಸವಾಲುಗಳೇನು?
ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಳೆ ಹಾವಳಿ ಪ್ರಮುಖ ಸಮಸ್ಯೆಯಾಗಿದೆ. ಶೇ.50ರಷ್ಟು ಅರಣ್ಯ ಪ್ರದೇಶಗಳಲ್ಲಿ ಕಳೆ ಹಾವಳಿ ಎದುರಾಗಿದೆ. ಸುಮಾರು 3-5 ಕೋಟಿ ರೂಪಾಯಿಗಳ ನಿಧಿಯ ಸೀಮಿತ ಹಂಚಿಕೆಯು ಸಮಸ್ಯೆಯನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಕೆಲವು ಸ್ವಯಂಸೇವಕ ಸಂಸ್ಥೆಗಳು ಮುಂದೆ ಬಂದಿವೆ, ಆದರೆ, ಕೆಲಸಕ್ಕೆ ಅವರಿಗೆ ಇಲಾಖೆ ಅಥವಾ ಸಿಎಸ್ಆರ್ ನಿಧಿಯಿಂದ ಹಣಕಾಸಿನ ನೆರವು ಬೇಕಾಗುತ್ತದೆ. ಕೈಯಿಂದಲೇ ಕಳೆಯನ್ನು ಕಿತ್ತುಹೈಕಬೇಕಿರುವುದರಿಂದ ಇದೊಂದು ಸವಾಲಾಗಿ ಪರಿಣಮಿಸಿದೆ. ಮಾನವ-ಪ್ರಾಣಿ ಸಂಘರ್ಷಕ್ಕೆ ಈ ಕಳೆಗಳೂ ಕೂಡ ಕೊಡುಗೆ ನೀಡುತ್ತವೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಯೋಜನೆಗಳನ್ನು ತೆರವುಗೊಳಿಸುವುದು, ವಾಯು ಮತ್ತು ಜಲ ಮಾಲಿನ್ಯ, ಹುದ್ದೆ ನೇಮಕ ವಿಚಾರ ಸೇರಿದಂತೆ ಹಲವು ಸಮಸ್ಯೆಗಳಿವೆ. ಇನ್ನೂ ಸಮಸ್ಯೆಗಳು ಬಗೆಹರಿದಿಲ್ಲವೇಕೆ?
ಇದು ನಿಜ. ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು, ಅಧ್ಯಕ್ಷರು ಇತರ ಸದಸ್ಯರೊಂದಿಗೆ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ. ವಿಶೇಷವಾಗಿ ವಾಯು ಮತ್ತು ಜಲ ಮಾಲಿನ್ಯದ ಸವಾಲುಗಳಿವೆ. ಒಳಚರಂಡಿ ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಇ-ತ್ಯಾಜ್ಯ, ತೈಲ ತ್ಯಾಜ್ಯ ಮತ್ತು ನಿರ್ಮಾಣ ತ್ಯಾಜ್ಯದಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸೂಕ್ತ ಸಂಖ್ಯೆಯ ಸಿಬ್ಬಂದಿಗಳು ಬೇಕು. ಸುಧಾರಣೆಗಳಿಗಾಗಿ ನಾವೂ ಒತ್ತಾಯಿಸುತ್ತಿದ್ದೇವೆ, ಆದರೆಸ, ಇದಕ್ಕೆ ಸಮಯ ಬೇಕಾಗುತ್ತದೆ.
ಹವಾಮಾನ ಬದಲಾವಣೆಯು ವಿಪತ್ತುಗಳಿಗೆ ಹೇಗೆ ಕೊಡುಗೆ ನೀಡುತ್ತಿದೆ?
ಶಿರೂರು ಮತ್ತು ವಯನಾಡಿನಲ್ಲಿ ಭೂಕುಸಿತಗಳು ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮವನ್ನು ಎತ್ತಿ ತೋರಿಸುತ್ತವೆ. ಕಾನೂನುಗಳು ಮತ್ತು ನಿಬಂಧನೆಗಳಿಗಿಂತಲೂ ಹವಾಮಾನ-ಸಂಬಂಧಿತ ಸವಾಲುಗಳನ್ನು ಪರಿಹರಿಸುವುದು ಮುಖ್ಯವಾಗಿದೆ, ಜಾಗೃತಿ ಬಹುಮುಖ್ಯವಾಗಿದೆ. ಸಾವಿರಾರು ಪ್ರಕರಣಗಳನ್ನು ಏಕಕಾಲದಲ್ಲಿ ನಿಭಾಯಿಸುವ ಸಾಮರ್ಥ್ಯ ನಮಗಿಲ್ಲದ ಕಾರಣ ಹವಾಮಾನ ನಿಯಮಗಳನ್ನು ಜಾರಿಗೊಳಿಸುವುದು ಕೂಡ ಕಷ್ಟ.
ಎಚ್‌ಎಂಟಿ ಭೂಮಿ ಬಹುಚರ್ಚಿತ ವಿಷಯವಾಗಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೂ ಜಟಾಪಟಿ ಶುರುವಾಗಿದೆ...?
ಯಾರೊಂದಿಗೂ ಹಗ್ಗಜಗ್ಗಾಟ ನಡೆಸುವ ಪ್ರಶ್ನೆಯೇ ಇಲ್ಲ. ಸುಮಾರು 599 ಎಕರೆ ವಿಸ್ತೀರ್ಣದ ಎಚ್‌ಎಂಟಿ ಜಮೀನು ಅರಣ್ಯ ಇಲಾಖೆಯ ಜಾಗವಾಗಿದ್ದು, ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. 1963ರಲ್ಲಿ ರಾಜ್ಯ ಸರಕಾರದಿಂದ ಯಾವುದೇ ಅನುಮೋದನೆ ಪಡೆಯದೆ ನಗರಾಭಿವೃದ್ಧಿ ಇಲಾಖೆ ಎಚ್‌ಎಂಟಿಗೆ ಹಸ್ತಾಂತರಿಸಿತ್ತು. 2006 ರಲ್ಲಿ, ಅವರು ಭೂಮಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು, ಸುಮಾರು 163 ಎಕರೆಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ 313 ಕೋಟಿ ರೂ, ಗಳಿಸಿದ್ದಾರೆ. ಇಲಾಖೆ ಅಧಿಕಾರಿಗಳಿಂದಲೂ ಕೆಲವು ತಪ್ಪು ನಿರ್ಧಾರಗಳಾಗಿವೆ. ಇದು ಸರ್ಕಾರಿ ಭೂಮಿಯಾಗಿದ್ದು, ಅದನ್ನು ವಾಪಸ್ ಪಡೆಯಲಾಗುವುದು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಈಗ ಏನಾಗುತ್ತದೆ?
ನಾವು ನಿಯಮಗಳನ್ನು ಅನುಸರಿಸಬೇಕಿದೆ. ಆಗಿನ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಸರ್ಕಾರದ ಆಸ್ತಿಗಳ ಮೇಲೆ ಮೂರನೇ ವ್ಯಕ್ತಿಯ ಹಕ್ಕುಗಳನ್ನು ರಚನೆಯಾಗಿದೆ. ಸುಮಾರು 280 ಎಕರೆ ಜಾಗ ಇನ್ನೂ ಖಾಲಿ ಇದೆ. ನಾವು ಪರ್ಯಾಯ ಭೂಮಿ ನೀಡಬಹುದು. ಬೆಂಗಳೂರಿನಲ್ಲಿ ಎಚ್‌ಎಂಟಿಗೆ ಇನ್ನೂ 100 ಎಕರೆ ಇದೆ. ಎಚ್‌ಎಂಟಿ ತನ್ನ ಭೂಮಿಯನ್ನು ಮಾರಿಲ್ಲ, ಅರಣ್ಯ ಇಲಾಖೆಗೆ ಸೇರಿರುವ ಭೂಮಿಯನ್ನು ಮಾರಿದೆ. ಇದೀಗ ಅವರು ತಮ್ಮ ಭೂಮಿಯನ್ನು ಇಲಾಖೆಗೆ ನೀಡಬಹುದು. ಈಗ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಮರುಪಡೆಯಲಾದ ಭೂಮಿಯಲ್ಲಿ ಲಾಲ್ ಬಾಗ್ ಅಥವಾ ಕಬ್ಬನ್ ಪಾರ್ಕ್‌ನಂತೆ ಉದ್ಯಾನ ರಚಿಸಿಸುವುದು ನಮ್ಮ ಗುರಿಯಾಗಿದೆ.
ಕಸ್ತೂರಿ ರಂಗನ್ ವರದಿ ಬಗ್ಗೆ ಏನು ಹೇಳುತ್ತೀರಿ?
ಕೇಂದ್ರ ಸರ್ಕಾರ ಆರನೇ ಬಾರಿಗೆ ಅಧಿಸೂಚನೆ ಹೊರಡಿಸಿದೆ. 2013ರಲ್ಲಿ ವರದಿ ಬಂದಿತ್ತು. ಕಳೆದ 11 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವರದಿಯು ಪಶ್ಚಿಮ ಘಟ್ಟಗಳ 10 ಜಿಲ್ಲೆಗಳ 39 ತಾಲ್ಲೂಕುಗಳಲ್ಲಿ 1,499 ಹಳ್ಳಿಗಳನ್ನು ಒಳಗೊಂಡ 20,664 ಚದರ ಕಿಮೀ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಶಿಫಾರಸು ಮಾಡಿದೆ. ಇಡೀ ಪ್ರದೇಶವನ್ನು ರಕ್ಷಿಸಿದರೆ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ಕಾನೂನು ಜಾರಿಯಾದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ಮತ್ತೊಂದು ಆತಂಕ. ನಾವು ಎಲ್ಲರೊಂದಿಗೂ ವಿವರವಾದ ಚರ್ಚೆ ನಡೆಸಿದ್ದೇವೆ.
ಪಂಚಾಯತ್, ಶಾಸಕರು ಮತ್ತು ಸಿಎಂ. ಎಲ್ಲಾ ಶಾಸಕರು ವರದಿಯನ್ನು ತಿರಸ್ಕರಿಸಿದ್ದಾರೆ. 20,664 ಚ.ಕಿ.ಮೀ.ಗಳಲ್ಲಿ, ಸುಮಾರು 16,100 ಚ.ಕಿ.ಮೀ ಈಗಾಗಲೇ ಸಂರಕ್ಷಿಸಲಾಗಿದೆ, ಪ್ರಸ್ತುತ ನಾವು ವರದಿಯನ್ನು ತಿರಸ್ಕರಿಸಿದ್ದೇವೆ. ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಅಂತಿಮಗೊಳಿಸಬಹುದು. ನಂತರ ನಾವು ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ.
ನಾಯಕತ್ವ ಬದಲಾವಣೆ ಬಗ್ಗೆ ಏನು ಹೇಳುತ್ತೀರಿ?
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅದು ಅಪ್ರಸ್ತುತ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ಊಹಾಪೋಹಗಳನ್ನು ಸೃಷ್ಟಿಸಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಉತ್ತಮ ಸರ್ಕಾರ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಯಶಸ್ಸಿನಿಂದ ವಿರೋಧ ಪಕ್ಷಗಳು ಅಸೂಯೆ ಪಟ್ಟಿವೆ. ಕೇಂದ್ರ ಸರ್ಕಾರವೂ ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕಲು ಐಟಿ, ಸಿಬಿಐ ಮತ್ತು ಇಡಿ ಎಲ್ಲಾ ರೀತಿಯ ವಿಷಯಗಳನ್ನು ಬಳಸುತ್ತಿದ್ದು, ಇವರನ್ನು ರಾಜಕೀಯವಾಗಿ ಎದುರಿಸುತ್ತೇವೆ.
ರಾಜಕೀಯ ಲಾಭಕ್ಕಾಗಿ ಸರ್ಕಾರ ಜಾತಿ ಗಣತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಅದರ ಬಗ್ಗೆ ನೀವು ಏನು ಹೇಳುತ್ತೀರಿ?
ನಮ್ಮ ಪ್ರಣಾಳಿಕೆಯಲ್ಲಿ ಜಾತಿ ಗಣತಿ ಮಾಡುವುದಾಗಿ ತಿಳಿಸಲಾಗಿತ್ತು. ನನ್ನ ಪ್ರಕಾರ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಮಾಡಬೇಕಿತ್ತು. ಇಲ್ಲಿ ಶೈಕ್ಷಣಿಕ ಸ್ಥಿತಿ ಸೇರಿದಂತೆ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಿ ಇತ್ತೀಚೆಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವು ಸಮುದಾಯಗಳು ಅನ್ಯಾಯಕ್ಕೆ ಕಾರಣವಾಗಬಹುದು ಮತ್ತು ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದಾರೆ. ವರದಿ ಇನ್ನೂ ಜಾರಿಯಾಗಿಲ್ಲ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುತ್ತೇವೆ.
ಬಿಜೆಪಿ ಕೂಡ ಪರಿಶಿಷ್ಟ ಜಾತಿಗೆ ಒಳಮೀಸಲಾತಿಗೆ ಆಗ್ರಹಿಸುತ್ತಿದೆ...
ಮೊದಲನೆಯದಾಗಿ ಹೇಳುವುದಾದರೆ ಬಿಜೆಪಿ ಮೀಸಲಾತಿಯ ವಿರುದ್ಧವಾಗಿದೆ. ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಹಲವು ಬಿಜೆಪಿ ನಾಯಕರು ಒಳಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. ಆದರೆ, ಇದನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ