
ನವದೆಹಲಿ: ದೆಹಲಿಯ ಯಮುನಾ ನದಿ ವಿಚಾರವಾಗಿ ಬಿಜೆಪಿ ಮತ್ತು ಎಎಪಿ ಪಕ್ಷಗಳ ನಡುವಿನ ವಾಗ್ಯುದ್ಧ ಮುಂದುವರೆದಿದ್ದು, ಯಮುನಾ ನದಿ ಕಲುಷಿತತೆಗೆ ಹರ್ಯಾಣದ ಬಿಜೆಪಿ ಸರ್ಕಾರ ಕಾರಣ ಎಂಬ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಖಡಕ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಯಮುನಾ ನದಿ ಸ್ವಚ್ಛಗೊಳಿಸುವ ಆಶ್ವಾಸನೆ ನೀಡಿದ್ದ ಕೇಜ್ರಿವಾಲ್ ಇದೀಗ ಮತ್ತೆ ದೆಹಲಿ ಚುನಾವಣೆ ಬಂದರೂ ಅದು ಈಡೇರಿಕೆಯಾಗಿಲ್ಲ. ಯಮುನಾ ನದಿ ಸ್ವಚ್ಛತಾ ವಿಚಾರವಾಗಿ ಕೇಂದ್ರ ಮತ್ತು ಹರ್ಯಾಣ ಸರ್ಕಾರಗಳ ವಿರುದ್ಧ ಬೊಟ್ಟು ಮಾಡುತ್ತಿರುವ ಕೇಜ್ರಿವಾಲ್ ಹರ್ಯಾಣ ಸರ್ಕಾರ ಕಲುಷಿತ ನೀರನ್ನು ಯಮುನಾ ನದಿಗೆ ಬಿಡುತ್ತಿದೆ ಎಂದು ಆರೋಪಿಸಿದ್ದರು.
ಕೇಜ್ರಿವಾಲ್ ಆರೋಪವೇನು?
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್ ಪಕ್ಷದ ರಾಷ್ಟೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಇತಿಹಾಸದಲ್ಲಿ ಎಂದಿಗೂ ಮಾಡದ ಕೆಲಸವನ್ನು ಬಿಜೆಪಿ ಮಾಡಿದೆ, ನೆರೆಯ ಹರಿಯಾಣದಲ್ಲಿ ಅಧಿಕಾರದಲ್ಲಿರುವ ಕೇಸರಿ ಪಕ್ಷವು ಆ ರಾಜ್ಯದಲ್ಲಿ ಮತ್ತು ರಾಷ್ಟ್ರ ರಾಜಧಾನಿಗೆ ಹರಿಯುವ ಯಮುನಾ ನದಿಗೆ ವಿಷಕಾರಿ ವಸ್ತುವನ್ನು ಸೇರಿಸಿದೆ ಎಂದು ಆರೋಪಿಸಿದ್ದರು.
‘‘ದೆಹಲಿ ಜನರಿಗೆ ಹರಿಯಾಣ, ಉತ್ತರ ಪ್ರದೇಶದಿಂದ ಕುಡಿಯುವ ನೀರು ಸಿಗುತ್ತದೆ… ಆದರೆ ಹರಿಯಾಣ ಸರಕಾರ ಯಮುನಾ ನದಿಯಿಂದ ದಿಲ್ಲಿಗೆ ಬರುವ ನೀರಿನಲ್ಲಿ ವಿಷ ಬೆರೆಸಿ ಇಲ್ಲಿಗೆ ಕಳುಹಿಸಿದೆ… ಅದು ನಮ್ಮ ದಿಲ್ಲಿ ಜಲದ ಜಾಗರೂಕತೆಯಿಂದ ಮಾತ್ರ. ಈ ನೀರನ್ನು ನಿಲ್ಲಿಸಲಾಗಿದೆ ಎಂದು ಮಂಡಳಿಯ ಎಂಜಿನಿಯರ್‌ಗಳು ತಿಳಿಸಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದರು.
ಪ್ರಧಾನಿ ಮೋದಿ ತಿರುಗೇಟು
ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, 'ಯಮುನಾ ನದಿ ನೀರನ್ನು ದೇಶದ ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ದೆಹಲಿಯಲ್ಲಿರುವ ಎಲ್ಲ ರಾಜತಾಂತ್ರಿಕರು ಕುಡಿಯುತ್ತಾರೆ. ಅಂದಮೇಲೆ ನನಗೆ ಹರಿಯಾಣ ಜನರು ವಿಷ ಬೇರಸುತ್ತಾರೆ ಎನ್ನುವುದನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ. ಹರ್ಯಾಣ ಬಿಜೆಪಿ ಸರ್ಕಾರ ಪ್ರಧಾನಿಗೆ ವಿಷದ ನೀರು ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
“ಹರಿಯಾಣದ ಜನರು ದೆಹಲಿಯಲ್ಲಿರುವವರಿಗಿಂತ ಭಿನ್ನವೇ? ಹರಿಯಾಣದಲ್ಲಿ ವಾಸಿಸುವವರ ಸಂಬಂಧಿಕರು ದೆಹಲಿಯಲ್ಲಿ ವಾಸಿಸುತ್ತಿಲ್ಲವೇ? ಹರಿಯಾಣದ ಜನರು ತಮ್ಮ ಸ್ವಂತ ಜನರು ಕುಡಿಯುವ ನೀರನ್ನು ವಿಷಪೂರಿತಗೊಳಿಸಬಹುದೇ? ಹರಿಯಾಣ ಕಳುಹಿಸಿದ ನೀರನ್ನು ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಸೇವಿಸುತ್ತಾರೆ, ಅದರಲ್ಲಿ ಈ ಪ್ರಧಾನಿಯೂ ಇದ್ದಾರೆ. ಕುಡಿಯುವ ನೀರನ್ನು ಒದಗಿಸುವುದು ಒಳ್ಳೆಯ ಕೆಲಸವೆಂದು ಪರಿಗಣಿಸುವ ದೇಶ ನಮ್ಮದು. ಇಂತಹ ಮಾತುಗಳನ್ನಾಡುವ ಜನರಿಗೆ ದೆಹಲಿಯ ಜನರು ತಕ್ಕ ಪಾಠ ಕಲಿಸುತ್ತಾರೆ ಎನ್ನುವ ಖಾತ್ರಿ ನನಗಿದೆ ಎಂದು ಅವರು ಹೇಳಿದರು.
ಅಂತೆಯೇ ನೀವು ಕಾಂಗ್ರೆಸ್ ಪಕ್ಷದ 15 ವರ್ಷಗಳ ಆಡಳಿತ ಹಾಗೂ ಆಮ್ ಆದ್ಮಿ ಪಕ್ಷದ 11 ವರ್ಷಗಳ ಆಡಳಿತವನ್ನು ನೋಡಿದ್ದೀರಿ, ಆದರೆ ದೆಹಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೆಯೇ ಉಳಿದಿವೆ. 25 ವರ್ಷಗಳಲ್ಲಿ ಅವರು (ಕಾಂಗ್ರೆಸ್ ಮತ್ತು ಎಎಪಿ) ನಿಮ್ಮ ಎರಡು ತಲೆಮಾರುಗಳನ್ನು ನಾಶಪಡಿಸಿದ್ದಾರೆ. ದೆಹಲಿಯಲ್ಲಿ ಇನ್ನೂ ಟ್ರಾಫಿಕ್ ಜಾಮ್, ನೀರು ನಿಲ್ಲುವುದು ಮತ್ತು ಮಾಲಿನ್ಯವಿದೆ ಎಂದರು. ಇದೇ ವೇಳೆ ಆಪ್ ಕಳೆದ ಎರಡು ಚುನಾವಣೆಯಲ್ಲಿ ಯಮುನಾ ನದಿಯ ಹೆಸರಿನಲ್ಲಿ ಮತ ಕೇಳಿದೆ. ಆದರೆ ಈಗ ಯಮುನಾ ಮತ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ವರ್ಷಗಳಲ್ಲಿ ಯಮುನಾ ಸ್ವಚ್ಚಗೊಳಿಸುವ ಭರವಸೆ ವ್ಯಕ್ತಪಡಿಸಿದರು.
Advertisement