
ಚಂಡೀಘಡ: ಯಮುನಾ ನದಿಗೆ ಹರ್ಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಸ್ನತಃ ತಾವೇ ನದಿಗಿಳಿದು ನೀರು ಕುಡಿಯುವ ಮೂಲಕ ತಿರುಗೇಟು ನೀಡಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಬುಧವಾರ ದೆಹಲಿಯ ಪಲ್ಲಾ ಗ್ರಾಮದ ಪಲ್ಲಾಘಾಟ್ ಗೆ ಆಗಮಿಸಿ ಸ್ವತಃ ತಾವೇ ನದಿಗಿಳಿದು ಯಮುನಾ ನದಿಯಿಂದ ನೀರು ತೆಗೆದುಕೊಂಡು ಸೇವಿಸಿದರು. ಈ ವೇಳೆ ಮಾತನಾಡಿದ ಅವರು, 'ಹರಿಯಾಣದ ನೀರು ವಿಷಕಾರಿಯಲ್ಲ, ಆದರೆ ನಿಮ್ಮ ಮನಸ್ಸು ಖಂಡಿತವಾಗಿಯೂ ವಿಷದಿಂದ ತುಂಬಿದೆ" ಎಂದು ಕೇಜ್ರಿವಾಲ್ ಗೆ ಖಡಕ್ ತಿರುಗೇಟು ನೀಡಿದರು.
'ಅರವಿಂದ್ ಕೇಜ್ರಿವಾಲ್ ಅವರ ದುರದೃಷ್ಟಕರ ಹೇಳಿಕೆಯು ಅವರ ರಾಜಕೀಯ ಲಾಭಕ್ಕಾಗಿ ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕಲು ನೀಡಲಾಗಿದೆ. ಇಂದು, ನಾನು ಇಲ್ಲಿ ಯಮುನಾ ನದಿಯ ದಡಕ್ಕೆ ಬಂದು ಯಮುನಾದಿಂದ ನೀರು ಕುಡಿದಿದ್ದೇನೆ. ಹರಿಯಾಣದ ಬಿಜೆಪಿ ಸರ್ಕಾರ ಯಮುನಾ ನದಿಗೆ ವಿಷ ಹಾಕಿದೆ ಎಂದು ಅವರು ಹೇಳಿದ್ದರು. ಸಾಮೂಹಿಕ ನರಮೇಧದ ಬಗ್ಗೆ ಅವರು ಮಾತನಾಡಿದರು. ಜಲಸಂಪನ್ಮೂಲ ಪ್ರಾಧಿಕಾರವು ಇಲ್ಲಿಂದ ಮಾದರಿಗಳನ್ನು ತೆಗೆದುಕೊಂಡಿತು ಮತ್ತು ನೀರಿನಲ್ಲಿ ಯಾವುದೇ ವಿಷ ಕಂಡುಬಂದಿಲ್ಲ. ಅರವಿಂದ್ ಕೇಜ್ರಿವಾಲ್ ತಮ್ಮ ಜೀವನದುದ್ದಕ್ಕೂ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ದೆಹಲಿ ಸಿಎಂ ಆತಿಶಿ ಅವರ ಆರೋಪಗಳಿಗೂ ತಿರುಗೇಟು ನೀಡಿರುವ ಸೈನಿ, 'ದೆಹಲಿ ಸಿಎಂ ಆತಿಶಿ ಅವರೇ, ವಿಪತ್ತಿನ ಚಪ್ಪಲಿಗಳನ್ನು ಧರಿಸಿ ಪಲ್ಲಾ ಗ್ರಾಮಕ್ಕೆ ಆಗಮಿಸುವ ನಿಮಗೆ ಯಮುನಾ ದಂಡೆಗೆ ಸ್ವಾಗತ. ಹರಿಯಾಣದಿಂದ ದೆಹಲಿಗೆ ಬರುವ ನೀರು ವಿಷಕಾರಿಯಲ್ಲ, ಆದರೆ ನಿಮ್ಮ ಮನಸ್ಸು ಖಂಡಿತವಾಗಿಯೂ ವಿಷದಿಂದ ತುಂಬಿದೆ. ನೀವು ಯಾವಾಗಲೂ ನಿಮ್ಮ ಸಮಸ್ಯೆಗಳಿಗೆ ಹರಿಯಾಣದ ಜನರನ್ನು ದೂಷಿಸುತ್ತಲೇ ಇರುತ್ತೀರಿ. ಕೆಲವೊಮ್ಮೆ ನೀರಿನ ಕೊರತೆಗೆ, ಕೆಲವೊಮ್ಮೆ ಹೊಗೆಯ ಸಮಸ್ಯೆ, ಮತ್ತು ಕೆಲವೊಮ್ಮೆ ನಿಮ್ಮ ಎಲ್ಲಾ ವೈಫಲ್ಯಗಳಿಗೆ ನಮ್ಮ ಹರ್ಯಾಣದ ಜನತೆಯನ್ನು ದೂಷಿಸುತ್ತಿರುತ್ತೀರಿ. ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement