
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಅಪಾರ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತಿದ್ದು ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರುವ ಪ್ರದೇಶದಲ್ಲಿ ಒಂದು ಸಾಮಾನ್ಯ ಹಲ್ಲುಜ್ಜುವ ಬೇವಿನ ಕಡ್ಡಿಯಿಂದ ಕೋಟಿ ಕೋಟಿ ರೂ ಸಂಪಾದನೆ ಮಾಡಬಹುದು ಎಂದರೆ ನೀವು ನಂಬುತ್ತೀರಾ.. ಅಚ್ಚರಿಯಾದರೂ ಇದು ಸತ್ಯ..
ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಆರಂಭವಾದದಿನದಿಂದ ಈವರೆಗೂ ಸುಮಾರು 10 ಕೋಟಿ ಗೂ ಅಧಿಕ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆ ಎಂದ ಹೇಳಲಾಗುತ್ತಿರುವ ಮಹಾ ಕುಂಭ 2025ಕ್ಕೆ, ಕೋಟಿ ಗೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಅಂತೆಯೇ ಇದು ಅಪಾರ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ಈ ಹಿಂದೆ ಚಹಾ ಮಾರಾಟ ಮಾಡುವ ವ್ಯಕ್ತಿ ತನ್ನ ಚಹಾ ಮಾರಾಟದಿಂದ ಒಂದೇ ದಿನದಲ್ಲಿ ಹತ್ತಾರು ಸಹಸ್ರ ರೂಗಳ ಸಂಪಾದನೆ ಮಾಡಿ ತೋರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ಕುಂಭಮೇಳದಲ್ಲಿ ವ್ಯಕ್ತಿಯೋರ್ವ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಿ ಕೋಟ್ಯಂತರ ರೂ ಆದಾಯ ಮಾಡುವ ಹೊಸ ಬಿಸಿನೆಸ್ ಐಡಿಯಾವನ್ನು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೊಸ ಹೊಸ ಬಿಸಿನೆಸ್ ಐಡಿಯಾಗಳು
ಫೆಬ್ರವರಿ ವರೆಗೆ ನಡೆಯುವ ಈ 144 ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ ಕಾರ್ಯಕ್ರಮವು ಉತ್ತರ ಪ್ರದೇಶ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 40 ಕೋಟಿ ಭಕ್ತರು ಸೇರುವ ನಿರೀಕ್ಷೆಯಿದೆ. ಕುಂಭಮೇಳದಿಂದ ಉತ್ತರ ಪ್ರದೇಶ ಸರ್ಕಾರ ಸುಮಾರು 2 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸುವ ನಿರೀಕ್ಷೆಯಿದೆ. ಅಂತೆಯೇ ಇದು ಅನೇಕ ಜನರಿಗೆ ಹಣ ಗಳಿಸುವ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಧಾರ್ಮಿಕ ಕಾರ್ಯಕ್ರಮ ಕೆಲವು ಸಣ್ಣ ಮಾರಾಟಗಾರರಿಗೆ ಉತ್ತಮ ಹಣ ಗಳಿಸುವ ಅವಕಾಶ ಹೇಗೆ ನೀಡುತ್ತದೆ ಎಂಬುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತಿವೆ.
ಬೇವಿನ ಕಡ್ಡಿ ಮಾರಿ ಭಾರಿ ಆದಾಯ
ಮಹಾಕುಂಭ ಮೇಳದಲ್ಲಿ ವ್ಯಕ್ತಿಯೋರ್ವ 'ಹಲ್ಲುಜ್ಜುವ ಬೇವಿನ ಕಡ್ಡಿ' ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆದರ್ಶ್ ತಿವಾರ್ ಎಂಬುವವರು ಈ ವಿಡಿಯೋ ಅಪ್ಲೋಡ್ ಮಾಡಿದ್ದರು. ಆ ವ್ಯಕ್ತಿ ಕೇವಲ ಬೇವಿನ ಕಡ್ಡಿ ಮಾರಾಟ ಮಾಡಿ ಸುಮ್ಮನಾಗಿದ್ದರೆ ಈ ವಿಡಿಯೋ ವೈರಲ್ ಆಗುತ್ತಿರಲಿಲ್ಲ. ಆದರೆ ಈತ ಈ ಬೇವಿನ ಕಡ್ಡಿ ಮಾರಾಟದಿಂದ ಭಾರಿ ಆದಾಯ ಗಳಿಸಬಹುದು ಎಂದು ತಲೆಗೆ ಹುಳ ಬಿಟ್ಟಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಶೂನ್ಯ ಬಂಡವಾಳ-ಅಧಿಕ ಲಾಭ
ಆ ವ್ಯಕ್ತಿ ಹೇಳಿದಂತೆ ಹಳ್ಳಿಗಳಲ್ಲಿ ಬೇವಿನ ಮರಗಳು ಸೊಂಪಾಗಿ ಬೆಳೆದಿರುತ್ತವೆ. ಅವುಗಳ ಹೆಚ್ಚುವರಿ ಕೊಂಬೆಗಳನ್ನು ಕತ್ತರಿಸಿ ಅವುಗಳನ್ನು ಸಣ್ಣಸಣ್ಣ ಕಡ್ಡಿಗಳನ್ನಾಗಿ ಕಟ್ ಮಾಡಬೇಕು. ಹೀಗೆ ಕತ್ತರಿಸಿದ ಸಣ್ಣ ಸಣ್ಣ ಕಡ್ಡಿಗಳನ್ನು ಮಾರಾಟ ಮಾಡಬೇಕು. ಹೀಗೆ ಬೇವಿನ ಕಡ್ಡಿಯನ್ನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದರೂ ಕೋಟ್ಯಂತರ ಹಣ ಗಳಿಸಬಹುದು ಎಂದು ಆತ ಹೇಳಿದ್ದಾನೆ.
ಲವರ್ ಕೊಟ್ಟ ಐಡಿಯಾ
ಇನ್ನು ಈ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಾಟ ಮಾಡುವ ಐಡಿಯಾವನ್ನು ಕೊಟ್ಟಿದ್ದು ಆ ವ್ಯಕ್ತಿಯ ಲವರ್ ಅಂತೆ. ಆಕೆ ಕೊಟ್ಟ ಐಡಿಯಾದಿಂದ ಆತ ಕುಂಭಮೇಳದಲ್ಲಿ ಬೇವಿನಕಡ್ಡಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿರುವ ಆತ, 'ನನ್ನ ಗೆಳತಿ ಬೇವಿನ ಕಡ್ಡಿ ವ್ಯವಹಾರದ ಕುರಿತಾಗಿ ನನಗೆ ಹೇಳಿದ್ದಳು. ಇ೦ದು ಆದೇ ಬೇವಿನಕಡ್ಡಿ ಮಾರಾಟದಿಂದ ದೊಡ್ಡ ಲಾಭ ಗಳಿಸುತ್ತಿದ್ದೆೇನೆ. ಕಳೆದ ಐದು ದಿನಗಳಿ೦ದ ಈ ಕೆಲಸ ಮಾಡುತ್ತಿದ್ದು ಇಲ್ಲಿಯವರೆಗೆ 30-40 ಸಾವಿರ ರೂ. ಗಳಿಕೆ ಮಾಡಿದ್ದೇನೆ. ಈಗ ನಾನು ದಿನಕ್ಕೆ 9-10 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸುತ್ತಿದ್ದೇನೆ. ನಾನು ಇನ್ನಷ್ಟು ಶ್ರಮ ಹಾಕಿದರೆ ಸುಲಭವಾಗಿ ನಾನು 15ರಿಂದ 20 ಸಾವಿರ ರೂವರೆಗೂ ಗಳಿಸಬಹುದು ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋವನ್ನು adarshtiwari20244 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೋಟಿಗಟ್ಟಲೆ ಜನರು ಈ ವಿಡಿಯೋ ನೋಡಿದ್ದಾರೆ.
Advertisement