ಜಾರ್ಖಂಡ್: ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ; ಮಹಿಳೆ ಸೇರಿ ಇಬ್ಬರು ನಕ್ಸಲರು ಹತ
ರಾಂಚಿ: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಸಿಪಿಐ (ಮಾವೋವಾದಿಗಳು) ನಡುವಿನ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಎರಡು ಐಎನ್‌ಎಸ್‌ಎಎಸ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
“ಜಾರ್ಖಂಡ್ ಪೊಲೀಸ್ ಮತ್ತು 209 ಕೋಬ್ರಾ ಬೆಟಾಲಿಯನ್‌ನ ಜಂಟಿ ತಂಡ, ಮಾವೋವಾದಿಗಳೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ಭದ್ರತಾ ಸಿಬ್ಬಂದಿಯ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ಚೈಬಾಸಾ ಎಸ್‌ಪಿ ಅಶುತೋಷ್ ಶೇಖರ್ ಅವರು ಹೇಳಿದ್ದಾರೆ.
“ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ ಇಬ್ಬರು ಬಂಡುಕೋರರ ಶವಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಮಾವೋವಾದಿಗಳಲ್ಲಿ ಒಬ್ಬನನ್ನು ವಲಯ ಕಮಾಂಡರ್ ಸಂಜಯ್ ಗಂಜು ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಭಯಾನಕ ಮಾವೋವಾದಿ ಅನಲ್ ದಾ ಅವರ ಮಹಿಳಾ ಸ್ನೇಹಿತೆ ಎಂದು ಹೇಳಲಾಗುತ್ತಿದ್ದು, ಅವರ ತಲೆಗೆ 1 ಕೋಟಿ ರೂ. ಬಹುಮಾನವಿತ್ತು ಎಂದರು.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಎಸ್ಪಿ ಪ್ರಕಾರ, ಜಾರ್ಖಂಡ್ ಪೊಲೀಸ್ ಮತ್ತು 209 ಕೋಬ್ರಾ ಬೆಟಾಲಿಯನ್‌ನ ಜಂಟಿ ತಂಡವು ಮಾವೋವಾದಿ ಪೀಡಿತ ಪ್ರದೇಶವಾದ ಸೋನುವಾದಲ್ಲಿ ಶೋಧ ಕಾರ್ಯಾಚರಣೆಗೆ ಹೋಗಿತ್ತು.
ಇಂದು ಬೆಳಗ್ಗೆ 7:00 ಗಂಟೆ ಸುಮಾರಿಗೆ ಪೊಲೀಸ್ ತಂಡ ಕಾಡಿನೊಳಗೆ ತೆರಳಿದ ತಕ್ಷಣ, ಮಾವೋವಾದಿಗಳು ಹೊಂಚು ಹಾಕಿ ಗುಂಡು ಹಾರಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಒಬ್ಬ ಬಂಡುಕೋರ ಸ್ಥಳದಲ್ಲೇ ಸಾವನ್ನಪ್ಪಿದನು ಎಂದು ಎಸ್ ಪಿ ತಿಳಿಸಿದ್ದಾರೆ.