
ಭುವನೇಶ್ವರ: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯ ಛತ್ತೀಸಗಢ-ಒಡಿಶಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿರಿಯ ಕೇಡರ್ ಸೇರಿದಂತೆ ಕನಿಷ್ಠ 14 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಅಂತರರಾಜ್ಯ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ನಕ್ಸಲ್ ಮುಕ್ತ ಭಾರತದ ಸಂಕಲ್ಪ ಮತ್ತು ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದ ನಕ್ಸಲಿಸಂ ಇಂದು ಕೊನೆಯುಸಿರೆಳೆದಿದೆ. ಇದು ನಕ್ಸಲಿಸಂಗೆ ಮತ್ತೊಂದು ಪ್ರಬಲ ಹೊಡೆತ. ನಕ್ಸಲ್ ಮುಕ್ತ ಭಾರತ ನಿರ್ಮಾಣದಲ್ಲಿ ನಮ್ಮ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ ಎಂದಿದ್ದಾರೆ.
ಸಿಆರ್‌ಪಿಎಫ್, ಸೋಜಿ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 14 ನಕ್ಸಲರನ್ನು ಹತ್ಯೆಮಾಡಿದ್ದಾರೆ' ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ನಡೆದ ಜಂಟಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವಿಗೀಡಾಗಿದ್ದು, ಕೋಬ್ರಾ ಜವಾನನೊಬ್ಬ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು, 12 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಒಟ್ಟು 14 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗರಿಯಾಬಂದ್ ಪೊಲೀಸ್ ಅಧೀಕ್ಷಕ ನಿಖಿಲ್ ರಖೇಚಾ ಹೇಳಿಕೆಯಲ್ಲಿ, ಮೃತರಲ್ಲಿ ಒಬ್ಬನನ್ನು ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ಜೈರಾಮ್ ಅಲಿಯಾಸ್ ಚಲಪತಿ ಎಂದು ಗುರುತಿಸಲಾಗಿದ್ದು, ಈತನ ಪತ್ತೆಗೆ 1 ಕೋಟಿ ರೂ. ಘೋಷಿಸಲಾಗಿತ್ತು. ಹತ್ಯೆಗೀಡಾದವರ ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಮಾವೋವಾದಿಗಳ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸೇರಿದಂತೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಡಿಶಾದ ನುವಾಪಾದ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಛತ್ತೀಸ್‌ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ನಕ್ಸಲರು ಇರುವ ಬಗ್ಗೆ ಗುಪ್ತಚರ ಮಾಹಿತಿ ಆಧಾರದ ಮೇಲೆ ಜನವರಿ 19ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.
ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ತಟಸ್ಥಗೊಳಿಸಲಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಅಪಾರ ಪ್ರಮಾಣದ ಸೆಲ್ಫ್-ಲೋಡಿಂಗ್ ರೈಫಲ್, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement