
ಅಹಮದಾಬಾದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಜನವರಿ 28, 2024 ರಂದು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಬೈಕ್ ಗೆ ಕಟ್ಟಿ, ಧಲ್ಸಿಮಲ್ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ.
ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ್ ಝಾಲಾ ಅವರ ಪ್ರಕಾರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15-20 ಜನ, ಮಹಿಳೆಯನ್ನು ಅಪಹರಿಸಿ ಈ ಕೃತ್ಯ ಎಸಗಿದ್ದಾರೆ.
ದುಷ್ಕರ್ಮಿಗಳು ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ವೀಡಿಯೊ ಪತ್ತೆಯಾದ ನಂತರ ಪೊಲೀಸರು ತ್ವರಿತವಾಗಿ ಕ್ರಮ ತೆಗೆದುಕೊಂಡಿದ್ದು, ಮಹಿಳೆಯನ್ನು ಆಕೆಯ ಅತ್ತೆ-ಮಾವಂದಿರ ಅಕ್ರಮ ಬಂಧನದಿಂದ ರಕ್ಷಿಸಿದ್ದಾರೆ.
ಬಂಧಿತ ವಯಸ್ಕ ಮಹಿಳೆಯರು ನ್ಯಾಯಾಂಗ ಬಂಧನದಲ್ಲಿದ್ದು, ಅಪ್ರಾಪ್ತ ವಯಸ್ಕರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ನಾಲ್ವರು ಪುರುಷರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇನ್ನೂ ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಬ್ಬ ಅಪ್ರಾಪ್ತ ವಯಸ್ಕ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆಯ ಪತಿ ಪ್ರಸ್ತುತ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಹೀಗಾಗಿ ಮಹಿಳೆ ತಮ್ಮ ಅತ್ತೆ-ಮಾವಂದಿರೊಂದಿಗೆ ವಾಸಿಸುತ್ತಿದ್ದರು. ಆದರೆ ಕೌಟುಂಬಿಕ ಕಲಹಗಳಿಂದಾಗಿ ಆಕೆ ಅವರನ್ನು ಬಿಟ್ಟು ಹೋಗಿದ್ದರು ಮತ್ತು ತನ್ನ ಗಂಡನ ಹಳ್ಳಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಹಾಗೂ ಕಳೆದ ಮೂರು ತಿಂಗಳಿಂದ ಆತನೊಂದಿಗೆ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
Advertisement