
ಮುಂಬೈ: ಕೇಂದ್ರ ಸರ್ಕಾರದ ಮಾಜಿ ಸಚಿವ ಮತ್ತು ಬಿಜೆಪಿ ಸಂಸದ ನಾರಾಯಣ್ ರಾಣೆ, ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮ ಸೋದರಸಂಬಂಧಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ಕಳೆದು ಹೋದ ಅಧಿಕಾರವನ್ನು ಪಡೆಯುವ ಶಕ್ತಿ ಅಥವಾ ಸಾಮರ್ಥ್ಯಗಳು ಉದ್ಧವ್ ಠಾಕ್ರೆ ಅವರಿಗೆ ಇಲ್ಲ, ಅವಿಭಜಿತ ಶಿವಸೇನೆಯ ಪತನಕ್ಕೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ.
ಸುಮಾರು ಎರಡು ದಶಕಗಳ ನಂತರ ಜುಲೈ 5 ರಂದು ಇಬ್ಬರೂ ವೇದಿಕೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಅವರು ಈಗ ರಾಜ್ ಠಾಕ್ರೆ ಅವರೊಂದಿಗೆ ಸ್ನೇಹಶೀಲರಾಗಲು ಪ್ರಯತ್ನಿಸುತ್ತಿದ್ದಾರೆ. ರಾಜ್ ಠಾಕ್ರೆಗೆ ಅವರು ಸಾಕಷ್ಟು ಕಿರುಕುಳ ನೀಡಿದ್ದರು. ಪಕ್ಷವನ್ನು ವಿಭಜಿಸಿ ತೊರೆಯುವಂತೆ ಮಾಡಿದ್ದರು ಎಂಬುದನ್ನು ಅವರು ಮರೆತಿದ್ದಾರೆಯೇ ಅಂದು ಅಷ್ಟು ನೋವು ಕೊಟ್ಟವರು ಇಂದೇಕೆ ಓಲೈಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾರಾಯಣ್ ರಾಣೆ ಕೇಳಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನಡುವೆ ಉತ್ತಮ ಬಾಂಧವ್ಯದ ಬಗ್ಗೆ ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿದ್ದು, ತ್ರಿಭಾಷಾ ನೀತಿಗೆ ಸಂಬಂಧಿಸಿದ ಸರ್ಕಾರದ ನಿರ್ಣಯವನ್ನು (ಜಿಆರ್) ರದ್ದುಗೊಳಿಸುವ ರಾಜ್ಯ ಸರ್ಕಾರದ ಘೋಷಣೆಯನ್ನು ಆಚರಿಸಲು ಜುಲೈ 5 ರಂದು ಅವರು ಜಂಟಿ ರ್ಯಾಲಿಯನ್ನು ನಡೆಸಲಿದ್ದಾರೆ.
ರಾಜ್ ಠಾಕ್ರೆ, ಗಣೇಶ್ ನಾಯಕ್, ಏಕನಾಥ್ ಶಿಂಧೆ ಮತ್ತು ನಾನು ಶಿವಸೇನೆಯ ಬೆಳವಣಿಗೆಗೆ ನಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೆವು. ಆದರೆ ಉದ್ಧವ್ ಠಾಕ್ರೆ ನಮ್ಮನ್ನು ಹೊರಹಾಕಿದರು. ಬಾಳಾಸಾಹೇಬ್ ಠಾಕ್ರೆ ಪಕ್ಷವನ್ನು ಅಧಿಕಾರಕ್ಕೆ ತಂದರು, ಆದರೆ ಉದ್ಧವ್ ಠಾಕ್ರೆ ಆ ಅಧಿಕಾರವನ್ನು ಕಳೆದುಕೊಂಡರು, ಶಿವಸೇನೆಯ ಪತನಕ್ಕೆ ಸಂಪೂರ್ಣ ಕಾರಣರಾಗಿದ್ದಾರೆ ಎಂದರು.
Advertisement