
ಮುಂಬೈ: ದೂರವಾಗಿರುವ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರು ಮತ್ತೆ ಒಂದಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಗುರುವಾರ ಬೆಳಗ್ಗೆ ಮುಂಬೈನ ಹೋಟೆಲ್‌ನಲ್ಲಿ ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಜಕೀಯವಾಗಿ ದೂರವಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆ ಈ ಸಭೆ ನಡೆದಿದೆ.
ಬಿಜೆಪಿ ಹಿರಿಯ ನಾಯಕ ಫಡ್ನವೀಸ್ ಮತ್ತು ರಾಜ್ ಠಾಕ್ರೆ ಅವರು ಇಂದು ಬೆಳಗ್ಗೆ ಬಾಂದ್ರಾ ಪ್ರದೇಶದ ಪಂಚತಾರಾ ಹೋಟೆಲ್‌ನಲ್ಲಿ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ. ಆದರೆ ಮಾತುಕತೆಯ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
ಈ ಕುರಿತು ಬಿಜೆಪಿ ಮುಖ್ಯ ವಕ್ತಾರ ಕೇಶವ್ ಉಪಾಧ್ಯೆಯ ಅವರನ್ನು ಸಂಪರ್ಕಿಸಿದಾಗ, ಇಬ್ಬರು ನಾಯಕರು ಉತ್ತಮ ಸ್ನೇಹಿತರು ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಭೇಟಿಯಾಗಿರಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಈ ವಾರ ಮುಂಬೈ ಸೇರಿದಂತೆ 29 ನಗರ ಪಾಲಿಕೆಗಳಲ್ಲಿ ವಾರ್ಡ್ ವಿಂಗಡಣೆಗೆ ಆದೇಶ ನೀಡುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ರಾಜ್ ಠಾಕ್ರೆ ಅವರು ತಮ್ಮ ನಡುವಿನ ಹಿಂದಿನ ಭಿನ್ನಾಭಿಪ್ರಾಯಗಳು "ಕ್ಷುಲ್ಲಕ" ಮತ್ತು ಉದ್ಧವ್ ಠಾಕ್ರೆ ಅವರೊಂದಿಗೆ ಕೆಲಸ ಮಾಡುವುದು ಕಷ್ಟವಲ್ಲ ಎಂದು ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಿಸಲು ಕ್ಷುಲ್ಲಕ ಜಗಳಗಳನ್ನು ಬದಿಗಿಡಲು ಸಿದ್ಧ ಎಂದು ಹೇಳಿದ್ದರು.
2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ ಅವರ ಪಕ್ಷವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.
Advertisement