
ಕೋಲ್ಕತ್ತಾ: 61 ವರ್ಷದ ರಾಜ್ಯಸಭಾ ಸದಸ್ಯ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ಪಶ್ಚಿಮ ಬಂಗಾಳ ಘಟಕದ ಮುಖ್ಯ ವಕ್ತಾರ ಸಮಿಕ್ ಭಟ್ಟಾಚಾರ್ಯ ಅವರು ಬುಧವಾರ ನೂತನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಸಮಿಕ್ ಭಟ್ಟಾಚಾರ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಭಟ್ಟಾಚಾರ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಹಾಲಿ ಬಿಜೆಪಿ ಅಧ್ಯಕ್ಷರಾಗಿರುವ ಉತ್ತರ ಬಂಗಾಳದ ಬಲೂರ್ಘಾಟ್ ಲೋಕಸಭಾ ಸದಸ್ಯ ಮತ್ತು ಕೇಂದ್ರ ಸಚಿವರಾದ 45 ವರ್ಷದ ಸುಕಾಂತ ಮಜುಂದಾರ್ ಅವರ ಸ್ಥಾನವನ್ನು ಭಟ್ಟಾಚಾರ್ಯ ಅಲಂಕರಿಸಲಿದ್ದಾರೆ.
ಭಟ್ಟಾಚಾರ್ಯ ಅವರು ಇಂದು ಮಜುಂದಾರ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೊಂದಿಗೆ ಕೋಲ್ಕತ್ತಾದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಅವಕಾಶ ನೀಡಲಾಗಿತ್ತು.
Advertisement