
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಾಟ್ಪಾರಾದಲ್ಲಿರುವ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಹೊರಗೆ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದು ಗುಂಡಿನ ದಾಳಿ ನಡೆಸಿದ್ದಾರೆ. ಬುಧವಾರ ತಡರಾತ್ರಿ ನಡೆದ ದಾಳಿಯಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ಮತ್ತು ಅವರ ಆಪ್ತರು ದಾಳಿಕೋರರನ್ನು ಬೆನ್ನಟ್ಟಿದ್ದು, ಅವರು ಸ್ಥಳದಿಂದ ಕಾಲ್ಕಿತ್ತಿರುವುದಾಗಿ ವರದಿಯಾಗಿದೆ.
"ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ದಾಳಿಯಲ್ಲಿ ಭಾಗಿಯಾದವರನ್ನು ಸುಮ್ಮನ್ನೆ ಬಿಡಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾರಕ್‌ಪುರ ಪೊಲೀಸ್ ಕಮಿಷನರ್ ಅಜಯ್ ಠಾಕೂರ್ ಹೇಳಿದ್ದಾರೆ. ಈ ದಾಳಿಯ ಹಿಂದೆ ಟಿಎಂಸಿ ಕೌನ್ಸಿಲರ್ ಸುನಿತಾ ಸಿಂಗ್ ಅವರ ಪುತ್ರ ನಮಿತ್ ಸಿಂಗ್ ಕೈವಾಡವಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
ಪೊಲೀಸರ ಎದುರೇ ಆತ ಗುಂಡು ಹಾರಿಸಿದ್ದು, ಮನಬಂದಂತೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆದಿದೆ ಎಂದು ಮಾಜಿ ಸಂಸದರು ಹೇಳಿದ್ದಾರೆ. ಮೇಘನಾ ಜೂಟ್ ಮಿಲ್‌ನಲ್ಲಿ ಎರಡು ಗುಂಪುಗಳ ಕಾರ್ಮಿಕರ ನಡುವಿನ ವಿವಾದದ ನಂತರ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಈ ಮಧ್ಯೆ ಸಿಂಗ್ ಮತ್ತು ಅವರ ಬೆಂಬಲಿಗರು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಈ ಮಧ್ಯೆ ಟಿಎಂಸಿಯ ಜಗದ್ದಲ್ ಶಾಸಕ ಸೋಮನಾಥ್ ಶ್ಯಾಮ್ ಆರೋಪಿಸಿದ್ದಾರೆ. ಅರ್ಜುನ್ ಸಿಂಗ್ ಮತ್ತು ಆತನ ಬೆಂಬಲಿಗರು ಮೇಘನಾ ಜೂಟ್ ಮಿಲ್‌ನಲ್ಲಿ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಗುಂಡಿನ ದಾಳಿ ನಡೆಸಿದ್ದು, ಯುವಕನೋರ್ವ ಗಾಯಗೊಂಡಿದ್ದಾನೆ. ಮಾಜಿ ಸಂಸದರ ಗುಂಪಿನ ಕಡೆಯ ಮೂರರಿಂದ ನಾಲ್ಕು ಜನರು ಗಾಯಗೊಂಡಿದ್ದು, ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ನಾವು ದೊಡ್ಡ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಅವರು ಹೇಳಿದರು.
ನಮಿತ್ ಸಿಂಗ್ ಘಟನಾ ಸ್ಥಳಕ್ಕೆ ಬಂದ ನಂತರ ಪರಿಸ್ಥಿತಿ ಉಲ್ಬಣಗೊಂಡಿದ್ದು, ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಕ್ಕೆ ಕಾರಣವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದೇವೆ. ಸ್ಥಳದಿಂದ ಅನೇಕ ಖಾಲಿ ಕಾಟ್ರಿಡ್ಜ್ ಗಳು, ಜೀವಂತ ಬಾಂಬ್ ಗಳನ್ನು ವಶಕ್ಕೆ ಪಡೆಯಲಾಗಿದೆಯ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement