
ಪಾಟ್ನಾ: ಬಿಹಾರದ ಪ್ರಮುಖ ಉದ್ಯಮಿ ಮತ್ತು ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಈ ಹತ್ಯೆ ಘಟನೆ ನಡೆದಿದೆ. ಪಾಟ್ನಾದ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಹೋಟೆಲ್ ಪಕ್ಕದಲ್ಲೇ ಇರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಅವರು ವಾಸವಾಗಿದ್ದರು ಎನ್ನಲಾಗಿದೆ.
ಆರೋಪಿಗಳು ಗುಂಡು ಹಾರಿಸಿ ತಕ್ಷಣ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಖೇಮ್ಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಒಂದು ಬುಲೆಟ್ ಮತ್ತು ಶೆಲ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜುಲೈ 4 ರಂದು ರಾತ್ರಿ 11 ಗಂಟೆ ಸುಮಾರಿಗೆ ಗಾಂಧಿ ಮೈದಾನದ ಬಳಿ ಉದ್ಯಮಿ ಗೋಪಾಲ್ ಖೇಮ್ಕಾ ಅವರಿಗೆ ಗುಂಡಿಕ್ಕಿ ಕೊಂದಿರುವ ಬಗ್ಗೆ ನಮಗೆ ಮಾಹಿತಿ ಬಂದಿತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸೆಂಟ್ರಲ್ ಸಿಟಿ ಎಸ್ಪಿ ದೀಕ್ಷಾ ತಿಳಿಸಿದ್ದಾರೆ.
Advertisement