
ನಾಗ್ಪುರ: ಸೂಪರ್ ಪವರ್ ರಾಷ್ಟ್ರಗಳ ನಿರಂಕುಶವಾದ ಮತ್ತು ಸರ್ವಾಧಿಕಾರದಿಂದ ಸಮನ್ವಯ, ಸಾಮರಸ್ಯ, ಪ್ರೀತಿ ಕಣ್ಮರೆಯಾಗುತ್ತಿದ್ದು, ಜಗತ್ತಿನಾದ್ಯಂತ ಸಂಘರ್ಷದ ವಾತಾವರಣವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ 'ಬಿಯಾಂಡ್ ಬಾರ್ಡರ್ಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ಯುದ್ಧ ಉಲ್ಲೇಖಿಸಿ ಮಾತನಾಡಿದ ನಿತಿನ್ ಗಡ್ಕರಿ, ಈ ಸಂಘರ್ಷಗಳು 'ಯಾವುದೇ ಸಮಯದಲ್ಲಿ' ಮಹಾಯುದ್ಧ ಪ್ರಾರಂಭವಾಗುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಯುದ್ಧಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಗತಿಗಳು ಮನುಷ್ಯರನ್ನು ರಕ್ಷಿಸುವುದನ್ನು ಕಠಿಣಗೊಳಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತವು ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡುತ್ತಿರುವ ಬುದ್ಧನ ಭೂಮಿ ಎಂದು ಶ್ಲಾಘಿಸಿದ ಗಡ್ಕರಿ, ಸದ್ಯ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಪರಿಶೀಲಿಸಿದ ಮತ್ತು ಚರ್ಚಿಸಿದ ನಂತರ ಭವಿಷ್ಯದ ನೀತಿಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಇಸ್ರೇಲ್- ಇರಾನ್ ಮತ್ತು ರಷ್ಯಾ- ಉಕ್ರೇನ್ ನಡುವಿನ ಯುದ್ಧದ ನಡುವೆ ಪ್ರಪಂಚದಾದ್ಯಂತ ಸಂಘರ್ಷದ ವಾತಾವರಣವಿದೆ. ಈ ಯುದ್ಧಗಳ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಿ ವಿಶ್ವಯುದ್ಧ ನಡೆಯುವ ಸಾಧ್ಯತೆಯಿದೆ ಎಂದು ಗಡ್ಕರಿ ಹೇಳಿದರು.
ಮುಂದುವರಿದ ತಂತ್ರಜ್ಞಾನದಿಂದಾಗಿ ಯುದ್ಧದ ಆಯಾಮಗಳು ಬದಲಾಗಿವೆ, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಬಳಕೆ ಹೆಚ್ಚುತ್ತಿದೆ. ಇದು ಟ್ಯಾಂಕ್‌ಗಳು ಮತ್ತು ಇತರ ರೀತಿಯ ವಿಮಾನಗಳ ಪ್ರಸ್ತುತತೆಯನ್ನು ಕಡಿಮೆ ಮಾಡುತ್ತಿದೆ. ಈ ಎಲ್ಲದರ ನಡುವೆ, ಮಾನವೀಯತೆಯನ್ನು ರಕ್ಷಿಸುವುದು ಕಷ್ಟಕರವಾಗಿದೆ. ಆಗಾಗ್ಗೆ ನಾಗರಿಕ ವಸಾಹತುಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಲಾಗುತ್ತದೆ. ಇದು ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದರು.
"ಹಾಗೆ ಹೇಳುವುದು ಸರಿಯಲ್ಲ. ವಾಸ್ತವಿಕವಾಗಿ ಇದೆಲ್ಲವೂ ನಿಧಾನವಾಗಿ ವಿನಾಶಕ್ಕೆ ಕಾರಣವಾಗುತ್ತದೆ. ಸೂಪರ್ ಪವರ್ ರಾಷ್ಟ್ರಗಳ ಸರ್ವಾಧಿಕಾರ ಮತ್ತು ನಿರಂಕುಶವಾದದಿಂದ ಸಮನ್ವಯ, ಸಾಮರಸ್ಯ ಮತ್ತು ಪ್ರೀತಿ ಕಣ್ಮರೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
Advertisement