'ಮೋಸ': ಭಾರತ 'ಅತ್ಯಂತ ಸಮಾನ' ದೇಶಗಳಲ್ಲಿ ಒಂದಾಗಿದೆ ಎಂಬ ಕೇಂದ್ರದ ಹೇಳಿಕೆಗೆ ಕಾಂಗ್ರೆಸ್ ಕಿಡಿ

ನರೇಂದ್ರ ಮೋದಿ ಸರ್ಕಾರದ ಡ್ರಮ್ ಬೀಟರ್ ಗಳು ಮತ್ತು ಚಿಯರ್ ಲೀಡರ್ ಗಳು ವಿಶ್ವಬ್ಯಾಂಕ್ ನ ಡೇಟಾವನ್ನು ತಿರುಚಲು ಆರಂಭಿಸಿದ್ದಾರೆ.
Jairam Ramesh
ಜೈರಾಮ್ ರಮೇಶ್
Updated on

ನವದೆಹಲಿ: ವಿಶ್ವಬ್ಯಾಂಕ್ ವರದಿಯನ್ನು ತಪ್ಪಾಗಿ ನಿರೂಪಿಸಿ, ಭಾರತ ವಿಶ್ವದ ಅತ್ಯಂತ ಹೆಚ್ಚು ಸಮಾನತೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

2011-12 ಮತ್ತು 2022-23ರ ನಡುವೆ ಭಾರತದಲ್ಲಿ ಅಸಮಾನತೆ ಗಣನೀಯವಾಗಿ ಕಡಿಮೆಯಾಗಿದೆ, ಈ ಮೂಲಕ ಭಾರತ ಜಾಗತಿಕವಾಗಿ ನಾಲ್ಕನೇ ಅತ್ಯಂತ ಸಮಾನ ರಾಷ್ಟ್ರವಾಗಿದೆ ಎಂದು ಶನಿವಾರ  ಪ್ರೆಸ್‌ ಇನ್ಫಾರ್ಮೇಶನ್‌ ಬ್ಯುರೋ(ಪಿಐಬಿ) ಬಿಡುಗಡೆ ಮಾಡಿದ ನಂತರ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.

ಪಿಐಬಿ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ನರೇಂದ್ರ ಮೋದಿ ಸರ್ಕಾರದ ಡ್ರಬ್ ಬೀಟರ್ ಗಳು ಮತ್ತು ಚಿಯರ್ ಲೀಡರ್ ಗಳು ವಿಶ್ವಬ್ಯಾಂಕ್ ನ ಡೇಟಾವನ್ನು ತಿರುಚಲು ಆರಂಭಿಸಿದ್ದಾರೆ. ಭಾರತವು ವಿಶ್ವದ ಅತ್ಯಂತ ಸಮಾನ ಸಮಾಜಗಳಲ್ಲಿ ಒಂದಾಗಿದೆ ಎಂದು "ಬೆರಗುಗೊಳಿಸುವ ಹೇಳಿಕೆ" ನೀಡಿದೆ ಎಂದು ಟೀಕಿಸಿದ್ದಾರೆ.

ಭಾರತದಲ್ಲಿ ಬಡತನ ಮತ್ತು ಅಸಮಾನತೆ ತುಲನಾತ್ಮಕವಾಗಿ ಹೆಚ್ಚಾಗಿದೆ ಎಂಬ ಏಪ್ರಿಲ್ 2025 ರಲ್ಲಿ ವಿಶ್ವ ಬ್ಯಾಂಕ್ ನ ಬಡತನ ಮತ್ತು ಸಮಾನತೆಯ ಸಂಕ್ಷಿಪ್ತ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಈ ಕಳವಳಗಳು ಇನ್ನೂ ಪ್ರಸ್ತುತವಾಗಿವೆ ಮತ್ತು ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಒತ್ತಾಯಿಸಿದ್ದಾರೆ.

Jairam Ramesh
ಸಮಾಜವಾದಿ-ಜಾತ್ಯತೀತ ಪದ ತೆಗೆಯುವುದು ಅಂಬೇಡ್ಕರ್ 'ಸಂವಿಧಾನದ ಆತ್ಮದ ಮೇಲೆ ನೇರ ದಾಳಿ': RSS ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ; Video

ಜುಲೈ 6 ರಂದು ಪಿಐಬಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ, ಭಾಗಶಃ ಸರ್ಕಾರಿ ದತ್ತಾಂಶದ ಸೀಮಿತ ಲಭ್ಯತೆ ಮತ್ತು ಅನಿಶ್ಚಿತ ಗುಣಮಟ್ಟ ಹಾಗೂ ಬಡತನವನ್ನು ಅಳೆಯಲು ಹಳೆಯ ಮಾನದಂಡಗಳ ಆಯ್ಕೆಯೇ ಕಾರಣ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

ವಿಶ್ವಬ್ಯಾಂಕ್ ವರದಿಯ ವಿಶ್ಲೇಷಣೆಯಲ್ಲಿ ಮೋದಿ ಸರ್ಕಾರವು "ನಿರ್ಲಕ್ಷ್ಯ" ವಹಿಸಿದ್ದು ಮಾತ್ರವಲ್ಲದೆ, ಅದು ಸಂಪೂರ್ಣವಾಗಿ "ಬೌದ್ಧಿಕವಾಗಿ ದಿವಾಳಿಯಾಗಿದೆ" ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

"ಕಡಿಮೆ ಮಧ್ಯಮ-ಆದಾಯದ ದೇಶವಾಗಿ, ಭಾರತದಲ್ಲಿ ಬಡತನವನ್ನು ಅಳೆಯಲು ಸೂಕ್ತವಾದ ದರವು ದಿನಕ್ಕೆ USD 3.65 ಆಗಿದೆ. ಈ ಅಳತೆಯ ಪ್ರಕಾರ, 2022 ರಲ್ಲಿ ಭಾರತದ ಬಡತನದ ಪ್ರಮಾಣವು ಶೇಕಡಾ 28.1 ರಷ್ಟು ಗಮನಾರ್ಹವಾಗಿ ಹೆಚ್ಚಾಗಿದೆ" ಎಂದು ಜೈರಾಮ್ ರಮೇಶ್ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

"ಶೇಕಡಾ 28.1 ರಷ್ಟು ಬಡತನದ ದರವನ್ನು ಹೊಂದಿರುವ ಯಾವುದೇ ದೇಶವು ವಿಶ್ವದ ಅತ್ಯಂತ ಸಮಾನ ಸಮಾಜಗಳಲ್ಲಿ ಒಂದಾಗಿದೆ ಎಂದು ಸಮರ್ಥನೀಯವಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com