
ದೆಹಲಿ: ದೆಹಲಿಯ ಮಜ್ನು ಕಾ ತಿಲಾ ಪ್ರದೇಶದಲ್ಲಿ ವ್ಯಕ್ತಿಯೋರ್ವ ತನ್ನ ಮಾಜಿ ಲಿವ್ ಇನ್ ಪಾರ್ಟರ್ ಹಾಗೂ ಆಕೆಯ ಮಗುವನ್ನು ಹತ್ಯೆ ಮಾಡಿರುವ ಭೀಕರ ಘಟನೆ ವರದಿಯಾಗಿದೆ.
ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಗುವಿನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೃತ್ಯ ಬಹಿರಂಗವಾಗಿದೆ. ಪೊಲೀಸ್ ಠಾಣೆಗೆ ಕರೆ ಮಾಡಿದ ಮಹಿಳೆ, ವ್ಯಕ್ತಿಯೋರ್ವ ತನ್ನ ಮನೆಯಲ್ಲಿ ತನ್ನ ಸ್ನೇಹಿತೆ ಹಾಗೂ ತನ್ನ ಮಗಳನ್ನು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ.
ಹತ್ಯೆಯಾಗಿರುವ ಮಹಿಳೆ 22-23 ವಯಸ್ಸಿನವರಾಗಿದ್ದು, ಉತ್ತರಾಖಂಡ್ ನಿಂದ ಬಂದು ದೆಹಲಿಯಲ್ಲಿದ್ದರು. ಇತ್ತೀಚೆಗೆ ಸ್ನೇಹಿತೆಯ ಮನೆಯಲ್ಲಿ ಆಶ್ರಯ ಪಡೆದಿದ್ದರು. ಇದಕ್ಕೂ ಮೊದಲು ದೆಹಲಿಯಲ್ಲೇ ನಿಖಿಲ್ ಎಂಬಾತನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು.
"ಮಹಿಳೆ ನಿಖಿಲ್ ಜೊತೆ ಹಲವಾರು ಸಮಸ್ಯೆಗಳನ್ನು ಮತ್ತು ಆಗಾಗ್ಗೆ ವಾದಗಳನ್ನು ಎದುರಿಸುತ್ತಿದ್ದರು, ಇದರಿಂದಾಗಿ ಅವಳು ಅಲ್ಲಿಂದ ಹೊರಟು ತನ್ನ ಸ್ನೇಹಿತೆಯ ಕುಟುಂಬದೊಂದಿಗೆ ವಾಸಿಸುತ್ತಿದ್ದರು" ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ರಾಜಾ ಬಂಥಿಯಾ ಹೇಳಿದ್ದಾರೆ.
ಘಟನೆ ನಡೆದ ಸಮಯದಲ್ಲಿ, ತಾಯಿ ಮೊಬೈಲ್ ಅಂಗಡಿ ನಡೆಸುತ್ತಿರುವ ತನ್ನ ಪತಿಯೊಂದಿಗೆ ಹೊರಗೆ ಹೋಗಿದ್ದರು, ಅವರು ತಮ್ಮ 5 ವರ್ಷದ ಮತ್ತೊಬ್ಬ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದರು.
ಮಂಗಳವಾರ ಮಧ್ಯಾಹ್ನ ನಿಖಿಲ್ ಮನೆಗೆ ಬಂದು ಮಹಿಳೆ ಮತ್ತು ಮಗುವಿನ ಕತ್ತು ಸೀಳಿ ಕೊಂದಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ನಿಖಿಲ್ ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಕೋಪದಿಂದ ಮೊದಲು ಮಹಿಳೆಯನ್ನು ಕೊಂದಿದ್ದಾನೆ ಮತ್ತು ನಂತರ ತನ್ನ ಮಾಜಿ ಸಂಗಾತಿಗೆ ತನ್ನಿಂದ ದೂರವಿರಲು ಸ್ಥಳ ಒದಗಿಸಿದ್ದಕ್ಕಾಗಿ ತಾಯಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಗುವನ್ನು ಕೊಂದಿದ್ದಾನೆ.
ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ತಲುಪಿದಾಗ ಕೋಣೆಯೊಳಗೆ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು ಎಂದು ಅಧಿಕಾರಿ ಹೇಳಿದರು. ಏತನ್ಮಧ್ಯೆ, ನಿಖಿಲ್ ತಲೆಮರೆಸಿಕೊಂಡಿದ್ದಾನೆ ಮತ್ತು ಅವನನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
Advertisement