
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ನಿಕಟ ಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮಂಗಳವಾರ ಒತ್ತಾಯಿಸಿದೆ.
ಸೋಮವಾರ ಛತ್ತೀಸ್‌ಗಢದ ರಾಯಪುರದಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ರಾಷ್ಟ್ರಪತಿ ಮುರ್ಮು ಮತ್ತು ಕೋವಿಂದ್ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರು ಆದರೆ ತ್ವರಿತವಾಗಿ ಅದನ್ನು ಸರಿಪಡಿಸಿಕೊಂಡರು.
ಬಿಜೆಪಿ ಯಾವಾಗಲೂ ದ್ರೌಪದಿ ಮುರ್ಮು ಮತ್ತು ರಾಮನಾಥ್ ಕೋವಿಂದ್ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದಾಗಿ ಹೇಳುತ್ತದೆ. ಆದರೆ ನಮ್ಮ ಆಸ್ತಿ, ಅರಣ್ಯ, ನೀರು ಮತ್ತು ಭೂಮಿಯನ್ನು ಕಸಿದುಕೊಳ್ಳಲು ಇದೆಲ್ಲವನ್ನೂ ಬಿಜೆಪಿ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು.
ಖರ್ಗೆ ಅವರ ಹೇಳಿಕೆಯನ್ನು "ಆಕ್ಷೇಪಾರ್ಹ" ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ಪಕ್ಷದ "ದಲಿತ ಆದಿವಾಸಿ ಮತ್ತು ಸಂವಿಧಾನ ವಿರೋಧಿ" ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ. 'ಖರ್ಗೆ ಅವರೇ, ನೀವು ದೊಡ್ಡದಾಗಿ ಮಾತನಾಡುತ್ತೀರಿ. ರಾಮ್ ನಾಥ್ ಕೋವಿಂದ್ ಅವರನ್ನು 'ಕೋವಿಡ್' ಎಂದು ಕರೆದಿದ್ದೀರಿ. 'ಮುರ್ಮಾ ಜೀ' ಅಂತಾ ಕರೆದು ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಭೂ ಮಾಫಿಯಾ ಎಂದು ಕರೆದಿದ್ದೀರಿ. ಆಸ್ತಿ, ಅರಣ್ಯಗಳನ್ನು ಕಿತ್ತುಕೊಳ್ಳಲು ಅವರು ರಾಷ್ಟ್ರಪತಿಯಾಗಿದ್ದಾರೆ ಎಂದು ಆರೋಪಿಸಿದ್ದೀರಿ ಎಂದು ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ಮುರ್ಮು ಮತ್ತು ಕೋವಿಂದ್ ವಿರುದ್ಧ ಅಪಮಾನಕಾರಿ, ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರು ಕ್ಷಮೆ ಯಾಚಿಸಬೇಕು ಎಂದು ಭಾಟಿಯಾ ಒತ್ತಾಯಿಸಿದ್ದಾರೆ. ದ್ರೌಪದಿ ಮುರ್ಮು ಮತ್ತು ಕೋವಿಂದ್ ಅವರಿಗೆ ಅಪಮಾನ ಮಾತ್ರ ಮಾಡಿಲ್ಲ. ಆದಿವಾಸಿ, ದಲಿತ ಸಮುದಾಯದ ಭಾವನೆಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿರುವ ಭಾಟಿಯಾ, ಖರ್ಗೆ ಹೇಳಿಕೆಗಾಗಿ ಕಾಂಗ್ರೆಸ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಲ್ಲದೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳದಿದ್ದಲಿ, ದೇಶದ ಪ್ರತಿಯೊಬ್ಬ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಪ್ಪಿಗೆ ಕಾಂಗ್ರೆಸ್ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖರ್ಗೆ ರಿಮೋಟ್ ಕಂಟ್ರೋಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು,ರಾಹುಲ್ ಗಾಂಧಿ ಪರವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇಡೀ ದೇಶದ ಆದಿವಾಸಿ, ದಲಿತ ಸಮುದಾಯ ಮತ್ತು ಮಹಿಳೆಯರು ಮಲ್ಲಿಕಾರ್ಜನ್ ಖರ್ಗೆ ಹಾಗೂ ಕಾಂಗ್ರೆಸ್ ಅವರನ್ನು ಖಂಡಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ವಾಗ್ದಾಳಿ ನಡೆಸಿದ್ದಾರೆ.
Advertisement