
ನವದೆಹಲಿ: 'ಆಪರೇಷನ್ ಸಿಂಧೂರ್' ವೇಳೆ ಭಾರತೀಯ ವಾಯುಪಡೆಯ ರಫೇಲ್ ಜೆಟ್ ಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬುದರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವಂತೆಯೇ ಈ ಯುದ್ಧ ವಿಮಾನಗಳನ್ನು ತಯಾರಿಸುವ ಡಸಾಲ್ಟ್ ಕಂಪನಿಯ ಸಿಇಒ ಅಂತಹ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಭಾರತ- ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ಸಮಯದಲ್ಲಿ ಯಾವುದೇ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿಲ್ಲ. ಆದರೆ ತಾಂತ್ರಿಕ ವೈಫಲ್ಯದಿಂದ ಭಾರತೀಯ ವಾಯುಪಡೆಯ ಒಂದು ಜೆಟ್ ನಾಶವಾಗಿದೆ. ಸದ್ಯ ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಸಾಲ್ಟ್ ಏವಿಯೇಷನ್ ಅಧ್ಯಕ್ಷ ಮತ್ತು ಸಿಇಒ ಎರಿಕ್ ಟ್ರಾಪ್ಪಿಯರ್ ಹೇಳಿರುವುದಾಗಿ ಫ್ರೆಂಚ್ ವೆಬ್ ಸೈಟ್ ಏವಿಯನ್ ಡಿ ಚೇಸ್ಸೆ ವರದಿ ಮಾಡಿದೆ.
ಯಾವುದೇ ಶತ್ರುವಿನಿಂದ ರಫೇಲ್ ಜೆಟ್ ನಾಶವಾಗಿಲ್ಲ. ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ 12,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿ ಹಾನಿಯಾಗಿದೆ. ಯಾವುದೇ ಶತ್ರುಗಳಿಂದ ಅಥವಾ ಪ್ರತಿಕೂಲ ರಾಡಾರ್ ಸಂಪರ್ಕದಿಂದ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಮೂರು ಭಾರತೀಯ ಡಸಾಲ್ಟ್ ರಫೇಲ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಆರೋಪಗಳ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿರುವ ಎರಿಕ್ ಟ್ರಾಪ್ಪಿಯರ್, ಈ ಆರೋಪಗಳು "ಅಸಮರ್ಪಕ ಮತ್ತು ಆಧಾರರಹಿತ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿರುವುದಾಗಿ ಏವಿಯನ್ ಡಿ ಚಾಸ್ಸೆ ವರದಿ ಮಾಡಿದೆ.
ಕಾರ್ಯಾಚರಣೆಯ ವೈಫಲ್ಯಗಳನ್ನು ಡೆಸಾಲ್ಟ್ ಸಿಇಒ ನಿರಾಕರಿಸಿದ್ದಾರೆ. ಆಪರೇಷನ್ ಕಾರ್ಯಾಚರಣೆ ವೇಳೆ ರಫೇಲ್ ಜೆಟ್ ನಾಶ ವಿಷಯದ ಬಗ್ಗೆ ಭಾರತ ಸರ್ಕಾರ ಅಥವಾ ಭಾರತೀಯ ವಾಯುಪಡೆ (ಐಎಎಫ್) ಯಾವುದೇ ಅಧಿಕೃತ ಮಾಹಿತಿ ಕೂಡಾ ನೀಡಿಲ್ಲ.
ಈ ಮಧ್ಯೆ ಕಳೆದ ತಿಂಗಳು CDS ಜನರಲ್ ಅನಿಲ್ ಚೌಹಾಣ್, ಸಿಂಗಾಪುರದಲ್ಲಿ ನಡೆದ ಸಂವಾದ ವೇಳೆಯಲ್ಲಿ ಆಪರೇಷನ್ ಸಿಂಧೂರ್ ವೇಳೆ ಭಾರತೀಯ ವಾಯುಪಡೆಗೂ ಕೆಲ ನಷ್ಟ ಆಗಿದೆ ಎಂದು ಒಪ್ಪಿಕೊಂಡಿದ್ದರು. ರಫೇಲ್ ಸೇರಿದಂತೆ ಆರು ಭಾರತೀಯ ವಿಮಾನಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದಿದ್ದರು.
ಅಪ ಪ್ರಚಾರದ ಹಿಂದೆ ಚೀನಾದ ಕೈವಾಡ?
ಭಾರತ- ಪಾಕಿಸ್ತಾನ ಸೇನಾ ಸಂಘರ್ಷದ ನಂತರದ ರಫೇಲ್ ಯುದ್ಧ ವಿಮಾನಗಳ ಜಾಗತಿಕ ಮಾರಾಟವನ್ನು ದುರ್ಬಲಗೊಳಿಸಲು ಚೀನಾ ತನ್ನ ರಾಯಭಾರ ಕಚೇರಿಗಳನ್ನು ಬಳಸುತ್ತಿದೆ ಎಂದು ಫ್ರೆಂಚ್ ಗುಪ್ತಚರ ಸಂಸ್ಥೆ ಆರೋಪಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ರಫೇಲ್ ಯುದ್ಧ ವಿಮಾನಗಳ ಖ್ಯಾತಿ ಮತ್ತು ಮಾರಾಟಕ್ಕೆ ಹಾನಿ ಮಾಡುವ ಉದ್ದೇಶದಿಂದ ಚೀನಾ ಈ ರೀತಿಯ ಅಪ ಪ್ರಚಾರ ಮಾಡುತ್ತಿದೆ ಎಂದು ವರದಿಯಾಗಿದೆ.
Advertisement