ಉತ್ತರ ಪ್ರದೇಶ: ನೀರು ತುಂಬಿದ ಗುಂಡಿಯಲ್ಲಿ ಮುಳುಗಿ ನಾಲ್ಕು ಮಕ್ಕಳು ದಾರುಣ ಸಾವು
ಪ್ರಯಾಗ್ ರಾಜ್: ಬೆಡೌಲಿ ಗ್ರಾಮದಲ್ಲಿ ನೀರು ತುಂಬಿದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಮೂರರಿಂದ ಐದು ವರ್ಷದೊಳಗಿನ ನಾಲ್ವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು ಎಂದು ಸಹಾಯಕ ಪೊಲೀಸ್ ಆಯುಕ್ತ (ಮೇಜಾ) ಎಸ್‌ಪಿ ಉಪಾಧ್ಯಾಯ ತಿಳಿಸಿದ್ದಾರೆ. ಮೃತರನ್ನು ವೈಷ್ಣವಿ (3), ಹುನಾರ್ (5), ಕನ್ಹಾ (5) ಮತ್ತು ಖೇಸರಿ (5) ಎಂದು ಗುರುತಿಸಲಾಗಿದೆ.
ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಕ್ಕಳು ಮನೆಗಳ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಶೋಧ ಕಾರ್ಯಾಚರಣೆ ಆರಂಭಿಸಲಾಯಿತು ಆದರೆ ಮಕ್ಕಳ ಪತ್ತೆ ಸಾಧ್ಯವಾಗಲಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಹುಡುಕಾಟ ಆರಂಭವಾಯಿತು ಮತ್ತು ಮಕ್ಕಳ ಶವಗಳನ್ನು ಹತ್ತಿರದ ಹೊಲದಲ್ಲಿ ನೀರು ತುಂಬಿದ ಗುಂಡಿಯಿಂದ ಹೊರತೆಗೆಯಲಾಯಿತು.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ಆರ್‌ಎನ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಕ್ಷಣ ಆರ್ಥಿಕ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ