
ಅಹಮದಾಬಾದ್: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಗಂಭೀರಾ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಮಹಿಸಾಗರ್ ನದಿಗೆ ಕಟ್ಟಲಾದ 40 ವರ್ಷ ಹಳೆಯ ಸೇತುವೆ ಕುಸಿದು, ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿದ್ದವು. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು 17ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಎರಡು ಟ್ರಕ್, ಎರಡು ಪಿಕಪ್ ವಾಹನ, ಒಂದು ರಿಕ್ಷಾ ಮತ್ತು ಹಲವಾರು ದ್ವಿಚಕ್ರ ವಾಹನಗಳು ಹಳೆಯ ಸೇತುವೆಯ ಮೇಲೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನಿನ್ನೆ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಎಂಟಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
"ಈಗ ಸಾವಿನ ಸಂಖ್ಯೆ 15ಕ್ಕೆ ತಲುಪಿದೆ. ನಾವು ಈಗಾಗಲೇ ಈಕೋ ಕಾರು ಹಾಗೂ ಪಿಕಪ್ ವ್ಯಾನ್ ಅನ್ನು ಹೊರ ತೆಗೆದಿದ್ದೇವೆ ಮತ್ತು ಟ್ರಕ್‌ಗಳನ್ನು ಹೊರತೆಗೆಯಲು ಭಾರೀ ಯಾಂತ್ರಿಕ ಶಕ್ತಿಯನ್ನು ಬಳಸುತ್ತಿದ್ದೇವೆ. ಹೆಚ್ಚಿನ ಮೃತದೇಹಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ವಡೋದರಾ ಜಿಲ್ಲಾಧಿಕಾರಿ ಅನಿಲ್ ಧಮೇಲಿಯಾ ಅವರು ತಿಳಿಸಿದ್ದಾರೆ.
ನಾನು ಸ್ಥಳದಲ್ಲಿದ್ದೇನೆ ಮತ್ತು ಇಲ್ಲಿ ರಕ್ಷಣಾ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದೇನೆ. ಉನ್ನತ ಮಟ್ಟದ ತಾಂತ್ರಿಕ ತಂಡವು ಸೇತುವೆಯನ್ನು ಪರಿಶೀಲಿಸುತ್ತಿದೆ ಮತ್ತು ಕುಸಿತದ ಹಿಂದಿನ ಕಾರಣವನ್ನು ಪತ್ತೆ ಹಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಯ ಹೇಳಿಕೆಯ ನಂತರ, ಮಧ್ಯಾಹ್ನ ರಕ್ಷಣಾ ತಂಡ ಮತ್ತೆ ಇಬ್ಬರ ಶವಗಳನ್ನು ಹೊರತೆಗೆದಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
Advertisement