
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಸ್ವಾಮ್ಯದ ವಿದ್ಯಾಸಾಗರ್ ವಿಶ್ವವಿದ್ಯಾಲಯದ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು "ಭಯೋತ್ಪಾದಕರು" ಎಂದು ಕರೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ವಿವಿಯ ಎಡವಟ್ಟಿಗೆ ರಾಜಕೀಯ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವಿವಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ವಿವಿ ಇದನ್ನು "ಮುದ್ರಣ ತಪ್ಪು" ಎಂದು ಕರೆದಿದೆ.
ಆರನೇ ಸೆಮಿಸ್ಟರ್ ಬಿಎ ಆನರ್ಸ್ ಇತಿಹಾಸ ಪರೀಕ್ಷೆಯ(ಬಂಗಾಳಿಯಲ್ಲಿ) ಪ್ರಶ್ನೆ ಪತ್ರಿಕೆಯಲ್ಲಿ ಈ ವಿವಾದಾತ್ಮಕ ಉಲ್ಲೇಖ ಕಾಣಿಸಿಕೊಂಡಿದೆ.
ಬ್ರಿಟಿಷ್ ಆಳ್ವಿಕೆಯಲ್ಲಿ "ಭಯೋತ್ಪಾದಕರಿಂದ ಹತ್ಯೆಯಾದ" ಮಿಡ್ನಾಪುರದ ಮೂವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ಹೆಸರುಗಳನ್ನು ಬರೆಯಿರಿ" ಎಂದು ವಿದ್ಯಾರ್ಥಿಗಳನ್ನು ಕೇಳಲಾಗಿದೆ.
ವಿಶ್ವವಿದ್ಯಾಲಯ ತನ್ನ ದೋಷವನ್ನು ಒಪ್ಪಿಕೊಂಡಿದ್ದು, ಇದು ಪ್ರೂಫ್ ರೀಡಿಂಗ್ ಲೋಪದಿಂದ ನಡೆದಿದೆ ಎಂದು ಹೇಳಿದೆ.
"ಇದು ಪ್ರೂಫ್ ರೀಡಿಂಗ್ ಸಮಯದಲ್ಲಿ ಗಮನಿಸದೆ ಹೋದ ಮುದ್ರಣ ದೋಷವಾಗಿದೆ" ಎಂದು ಕುಲಪತಿ ದೀಪಕ್ ಕರ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
"ಪ್ರಶ್ನೆಪತ್ರಿಕೆ ವಿತರಿಸಿದ ನಂತರ, ತಿದ್ದುಪಡಿಗಳನ್ನು ಮಾಡಲು ಸಮಯವಿರಲಿಲ್ಲ. ಈ ಬಗ್ಗೆ ವಿವರವಾದ ವರದಿ ನೀಡುವಂತೆ ನಾನು ಪರೀಕ್ಷಾ ನಿಯಂತ್ರಕರನ್ನು ಸೂಚಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
Advertisement