
ತೀವ್ರ ಧಾರಾಕಾರ ಮಳೆಯಿಂದ ರಸ್ತೆಯಲ್ಲಿ ಉಂಟಾದ ಪ್ರವಾಹದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದ ಮೊಬೈಲ್ ಫೋನ್ ನ್ನು ಜೈಪುರದ ಯುವಕನೊಬ್ಬ ಹತಾಶನಾಗಿ ಹುಡುಕುತ್ತಿರುವ ಹೃದಯ ವಿದ್ರಾವಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಭಾವನಾತ್ಮಕ ಘಟನೆಯನ್ನು ದಾರಿಹೋಕರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ನೋಡಿದವರಿಗೆ ಅಯ್ಯೋ ಪಾಪ ಎನಿಸುತ್ತದೆ.
ಜೈಪುರದ ರಾಮನಿವಾಸ್ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಭಾರೀ ಮಳೆಯಿಂದಾಗಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಸ್ತೆ ತುಂಬಾ ನೀರು ನಿಂತಿತ್ತು. ಹಲ್ದಾರ್ ಎಂಬ ಯುವಕ ತನ್ನ ಆಕ್ಟಿವಾದಲ್ಲಿ ಸವಾರಿ ಮಾಡುತ್ತಿದ್ದಾಗ ಸ್ಕಿಡ್ ಆಗಿ ಬಿದ್ದಿದ್ದಾನೆ. ಆತ ಬೀಳುತ್ತಿದ್ದಂತೆ ಅವನ ಮೊಬೈಲ್ ಫೋನ್ ಕೂಡ ಜಾರಿ ಬಿದ್ದು ಹೋಗಿದೆ.
ದುಃಖಿತನಾಗಿದ್ದ ಹಲ್ದಾರ್, ತನ್ನ ಫೋನ್‌ಗಾಗಿ ಕೆಸರುಮಯ ನೀರಿನಲ್ಲಿ ತೀವ್ರವಾಗಿ ಹುಡುಕುತ್ತಿರುವುದು ಕಾಣುತ್ತಿದೆ. ಬಹಳ ಸಮಯ ಹುಡುಕಿದರೂ ಸಿಗಲಿಲ್ಲ. ಹತಾಶನಾಗಿ ಕೂತು ಅಳುತ್ತಿರುವ ದೃಶ್ಯ ಎಂಥವರ ಮನಸ್ಸನ್ನು ಕಲಕುವಂತಿದೆ.
ರಾಮ್ ನಿವಾಸ್ ಬಾಗ್ ಬಳಿಯ ಪ್ರದೇಶವು ಒಂದು ಬದಿಯಲ್ಲಿ ಇಳಿಜಾರನ್ನು ಹೊಂದಿದ್ದು, ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ಬಂದಾಗಲೆಲ್ಲಾ ರಸ್ತೆ ಮೇಲೆ ನೀರು ಸಂಗ್ರಹವಾಗುತ್ತದೆ.
Advertisement