
ಔರೈಯಾ: ಉತ್ತರ ಪ್ರದೇಶದ ಔರೈಯಾ ನ್ಯಾಯಾಲಯ 2024ರಲ್ಲಿ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಸೆಂಗರ್ ನದಿಯಲ್ಲಿ ಮುಳುಗಿಸಿ ಕೊಂದ ಮಹಿಳೆಗೆ ಮರಣದಂಡನೆ ಶಿಕ್ಷೆ ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೈಫ್ ಅಹ್ಮದ್ ಅವರು ಗುರುವಾರ ಮೂವರು ಮಕ್ಕಳನ್ನು ಕೊಂದ ಪ್ರಿಯಾಂಕಾ ತಪ್ಪಿತಸ್ಥಳೆಂದು ಘೋಷಿಸಿ ಮರಣದಂಡನೆ ವಿಧಿಸಿದರು. ಅಲ್ಲದೆ ಕೊಲೆಗೆ ಸಾಥ್ ನೀಡಿದ ಆಕೆಯ ಪ್ರಿಯಕರ ಆಶಿಶ್ ಅಲಿಯಾಸ್ ಡ್ಯಾನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕೊಲೆ ಯತ್ನದಿಂದ ಬದುಕುಳಿದ ಪ್ರಿಯಾಂಕಾಳ ಒಂಬತ್ತು ವರ್ಷದ ಮಗ ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯ ಹೇಳಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಸರ್ಕಾರಿ ವಕೀಲರು ತನ್ನ ಪ್ರಿಯಕರನೊಂದಿಗೆ ಮೂವರು ಮುಗ್ಧ ಮಕ್ಕಳನ್ನು ನೀರಿನಲ್ಲಿ ಮುಳುಗಿಸಲು ಸಂಚು ರೂಪಿಸಿದ ತಾಯಿಯ ಈ ಕೃತ್ಯ "ಅಪರೂಪದಲ್ಲಿ ಅಪರೂಪ" ಎಂದು ವಾದಿಸಿದರು.
ನ್ಯಾಯಾಲಯವು ಪ್ರಿಯಾಂಕಾಗೆ 2.5 ಲಕ್ಷ ರೂ. ಮತ್ತು ಆಶಿಶ್‌ಗೆ 1 ಲಕ್ಷ ರೂ. ದಂಡವನ್ನು ವಿಧಿಸಿದೆ. ಇದಲ್ಲದೆ, ಒಟ್ಟು ದಂಡದ ಮೊತ್ತದ ಶೇಕಡಾ 75 ರಷ್ಟು ಮೊತ್ತವನ್ನು ಬದುಕುಳಿದ ಮಗು ಸೋನುಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪೊಲೀಸರ ಪ್ರಕಾರ, ಪ್ರಿಯಾಂಕಾ ತನ್ನ ಪತಿಯ ಮರಣದ ನಂತರ ಆಶಿಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಜೂನ್ 27, 2024 ರಂದು, ಪ್ರಿಯಾಂಕಾ ಮತ್ತು ಆಶಿಶ್ ತಮ್ಮ ನಾಲ್ವರು ಗಂಡು ಮಕ್ಕಳಾದ ಸೋನು (9), ಮಾಧವ್ (6), ಆದಿತ್ಯ (4), ಮತ್ತು ಮಂಗಲ್ (2) ಅವರನ್ನು ದೇವರಪುರದ ಸೆಂಗರ್ ನದಿ ದಂಡೆಗೆ ಕರೆದೊಯ್ದು, ಮಾದಕ ದ್ರವ್ಯ ನೀಡಿ ಒಬ್ಬೊಬ್ಬರಾಗಿ ನೀರಿಗೆ ಎಸೆದರು ಎಂದು ವರದಿಯಾಗಿದೆ.
ಸ್ಥಳೀಯರು ಹಿರಿಯ ಮಗ ಸೋನುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಸೋನುಗೆ ಪ್ರಜ್ಞೆ ಬಂದ ನಂತರ ತನ್ನ ತಾಯಿಯ ವಿರುದ್ಧ ನಿರ್ಣಾಯಕ ಸಾಕ್ಷ್ಯ ಹೇಳಿದ್ದಾನೆ. ಆದರೆ ಮೂವರು ಕಿರಿಯ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಮಹಿಳೆಯ ಸೋದರ ಮಾವ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಿಯಾಂಕಾ ಮತ್ತು ಆಶಿಶ್ ಇಬ್ಬರನ್ನೂ ಬಂಧಿಸಿ, ನಂತರ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು ಎಂದು ಸರ್ಕಾರಿ ವಕೀಲ ಅಭಿಷೇಕ್ ಮಿಶ್ರಾ ತಿಳಿಸಿದ್ದಾರೆ.
Advertisement